ಕಾರವಾರ: ನಿಜವಾದ ಭಾರತ ಹಳ್ಳಿಯಲ್ಲಿ ನೆಲೆಸಿದೆ ಎಂಬ ಗಾಂಧೀಜಿಯವರ ಮಾತು ಬದಲಾಗಿ, ನಿಜವಾದ ಭಾರತ ಆರೋಗ್ಯ ಮತ್ತು ನೈರ್ಮಲ್ಯಯುತ ಹಳ್ಳಿಯಲ್ಲಿ ನೆಲೆಸಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಈಶ್ವರ ಕಾಂದೂ ಹೇಳಿದರು.
ಜಿಲ್ಲಾ ಮಟ್ಟದ ತರಬೇತುದಾರರ ತರಬೇತಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್ ಮನ್ನಣೆಯಲ್ಲಿ ಮುಖ್ಯಮಂತ್ರಿಗಳು ಈ ಅಭಿಯಾನಕ್ಕಾಗಾಗಿ ಹೆಚ್ಚು ಒತ್ತು ನೀಡಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಇಲಾಖೆ ಈ ಅಭಿಯಾನವನ್ನು ಅನುಷ್ಠಾನ ಮಾಡಿದೆ. ನಮ್ಮ ಜಿಲ್ಲೆಯಲ್ಲಿ 229 ಗ್ರಾಮ ಪಂಚಾಯತಗಳಿದ್ದು, ಪ್ರತಿ ಗ್ರಾಮ ಪಂಚಾಯತಿಗೆ 30 ಸಾವಿರ ಅನುದಾನ ಮೀಸಲಿದ್ದು ಆರೋಗ್ಯ ತಪಾಸಣಾ ಕಿಟ್ ಒದಗಿಸಲು ಸೂಚಿಸಿದೆ. ಆರೋಗ್ಯ ಅಮೃತ್ ಅಭಿಯಾನವು ಪತ್ರಿಯೊಂದು ಗ್ರಾಮ, ಹಳ್ಳಿ, ಮನೆ, ವ್ಯಕ್ತಿಗೂ ತಲುಪುವ ರೀತಿ ನೀವು ಕಾರ್ಯನಿರ್ವಹಿಸಬೇಕಾಗಿದೆ. ಶಿಕ್ಷಣ ಎಷ್ಟು ಪ್ರಮುಖವಾಗಿದೆಯೋ ಅದಕ್ಕಿಂತ ಹೆಚ್ಚಾಗಿ ನಮ್ಮ ಆರೋಗ್ಯ ಮುಖ್ಯವಾದುದಾಗಿದೆ. ಕಾರಣ ಕೋವಿಡ್ ಸಮಯದಲ್ಲಿ ಜನರಿಗೆ ಮೂಲಭೂತ ಚಿಕಿತ್ಸೆಗಳಿಗೆ ಯಾವ ರೀತಿಯ ತೊಂದರೆಗಳಾಗಿದ್ದವು ಎಂದು ನಾವು ಈಗಾಗಲೇ ಅರಿತುಕೊಂಡಿದ್ದೇವೆ. ಆದ್ದರಿಂದ ಆರೋಗ್ಯ ತಪಾಸಣೆಗಾಗಿ ಹೆಚ್ಚಿನ ಸಮಯ ಮಿಸಲಿಟ್ಟು ನೀವುಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಡಿ.ಚಕ್ಕಪ್ಪ ಗೌಡ ಮಾತನಾಡಿ, ಪ್ರತಿಯೊಬ್ಬರಿಗೆ ಆರೋಗ್ಯ ತುಂಬಾ ಮಹತ್ವವಾದುದು ಆದ್ದರಿಂದ ಈ ಅಭಿಯಾನದ ಮೂಲಕ ಕಡು ಬಡಕುಟುಂಬಗಳಿಗೂ ಕೂಡಾ ಈ ಯೋಜನೆ ಪ್ರಯೋಜನೆ ಪಡೆಯಲು ಸಹಕಾರ ವಾಗುತ್ತದೆ. ಕರ್ನಾಟಕದಲ್ಲಿ ನಮ್ಮ ರಾಜ್ಯದಲ್ಲಿ ಪ್ರಥಮ ಬಾರಿಗೆ ಆರೋಗ್ಯ ಅಮೃತ್ ಯೋಜನೆಯು ಅನುಷ್ಠಾನವಾಗಿದ್ದು, ಒಟ್ಟು 14 ಚಿಕಿತ್ಸಾ ಸಾಧನಗಳಿರುವ ಈ ಕಿಟ್‌ನ್ನು ಪ್ರತಿ ಗ್ರಾಮ, ಹಳ್ಳಿಗಳಿಗಳಿಗೆ ವಿತರಿಸಲಾಗುತ್ತಿದ್ದೆ. ಈ ತರಬೇತಿಯಿಂದ ನಮ್ಮ ಗ್ರಾಮ ಆರೋಗ್ಯ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಶರದ ನಾಯಕ, ಯಾವುದೇ ಕಾರ್ಯಕ್ರಮ ಅನುಷ್ಠಾನ ಮಾಡುವ ಹಿಂದೆ ಅದರ ಉದ್ದೇಶವನ್ನು ನಾವು ಮೊದಲು ಅರಿತುಕೊಳ್ಳಬೇಕು. ಈ ಅಭಿಯಾನವು ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ತಪಾಸಣೆ ಮತ್ತು ಚಿಕಿತ್ಸೆಗೆ ಪೂರಕವಾಗಿರಬೇಕು. ಆಗಿನ ಕಾಲಕ್ಕೆ 60, 50 ವರ್ಷಕ್ಕೆ ಬರುತ್ತಿದ್ದ ಕಾಯಿಲೆಗಳು ಈಗ 30, 40ಕ್ಕೆ ಬರುತ್ತಿರುವುದು ಸರ್ವೆ ಸಾಮಾನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವೀಪ್ ಕಮಿಟಿಯಿಂದ ರಚಿಸಿರುವ ‘ಮೈ ಭಾರತ ಹು, ಹಮ್ ಭಾರತಕೆ ಮತದಾರ ಹೈ’ ಚುನಾವಣಾ ಗೀತೆಯನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು ಹಾಗೂ ಈ ಚುನವಾಣಾ ಗೀತೆಯನ್ನು ಕಸ ವಿಲೇವಾರಿ ವಾಹನಗಳಲ್ಲಿ ಮತ್ತು ಪತ್ರಿಯೊಂದು ಕಾರ್ಯಕ್ರದಲ್ಲೂ ಪ್ರದರ್ಶಿಸುವಂತೆ ಸಿಇಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮ ಪಂಚಾಯತ್ ಆರೋಗ್ಯ ಅಮೃತ್ ಅಭಿಯಾನದಡಿ ಆರೋಗ್ಯ ತಪಾಸಣಾ ಕೈಪಿಡಿ ಮತ್ತು ಕಿಟ್ ನ್ನು ಬಿಡುಗಡೆ ಮಾಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಅನೀಮಿಯಾ ಹಾಗೂ ಋತುಚಕ್ರ ನೈರ್ಮಲ್ಯ ಇತರೆ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮತ್ತು ಗ್ರಾಮ ಪಂಚಾಯತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತಿರಿದ್ದರು.