ಕಾರವಾರ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಏನನ್ನು ಸಾಧಿಸಬಹುದು. ಸಾಧನೆಗೆ ಬಡತನ ಅಡ್ಡಿಯಾಗದು ಹಾಗೂ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕ್ರೀಡೆ, ಸಂಸ್ಕೃತಿ ಮತ್ತು ಕೌಶಲ್ಯ ಅಭಿವೃದ್ಧಿಯ 2022-23 ವರ್ಷದ ಜಿಮ್ಖಾನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಡಾ.ಮಹೇಶ ಗೊಳಿಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡದೆ, ಅಂತರಾತ್ಮದ ಮೌಲ್ಯಗಳು ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿ, ಶಿಸ್ತು, ಸಂಯಮ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಉತ್ತಮ ಆರೋಗ್ಯ, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಜೀವನದ ಗುರಿ ತಲುಪಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಸೋಮಲಿಂಗ ಬಾಳೆಕಾಯಿ ಹಾಗೂ ಶೈಕ್ಷಣಿಕ ಸಹಾಯಕಿ ಗಿರಿಜಾ ಗೌಡ ಇವರಿಗೆ ಇತ್ತೀಚೆಗೆ ನಡೆದ ಪದವಿ ಉಪನ್ಯಾಸಕರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಕ್ಕೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಪ್ರಾರ್ಥನ ಗೀತೆಯನ್ನು ಸುಷ್ಮಾ ವಾಲ್ಮಿಕಿ ಮತ್ತು ಶಶಿಕಲಾ ಕಮತಳ್ಳಿ ಹಾಡಿದರು. ಜಿಮಖಾನಾ ಕಾರ್ಯಕ್ರಮದ ಅಧ್ಯಕ್ಷ ಡಾ.ಹನುಮಂತ ಮುಸ್ತಾರಿ ಸ್ವಾಗತಿಸಿದರು. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಖುಷ್ಬು ಹಾಗೂ ನಾಧಿಯಾ ಶೇಖ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಅಧಿಕಾರಿ ಡಾ.ಜೆ.ಎಲ್. ರಾಥೋಡ್ ವಹಿಸಿದ್ದರು. ಡಾ.ಶಿವಕುಮಾರ್ ಹರಗಿ ಮತ್ತು ಕೇಂದ್ರದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುನ್ನುಡಿಯನ್ನು ಜಿಮ್ಖಾನಾ ಕಾರ್ಯದರ್ಶಿ ಚಂದ್ರುಕುಮಾರ ನುಡಿದರು. ವಿದ್ಯಾರ್ಥಿಗಳಾದ ಅಂಕಿತ ನಾಯ್ಕ ವಂದಿಸಿದರು.
ಸ್ನಾತಕೋತ್ತರ ಕೇಂದ್ರದ ಜಿಮ್ಖಾನಾ ಸಮಾರಂಭದ ಉದ್ಘಾಟನೆ
