ಅಂಕೋಲಾ: ತಾಲೂಕಿನ ಗ್ರಾಮಗಳಲ್ಲಿ ನರೇಗಾ ಅಡಿ ಸುಸ್ಥಿರ ಮತ್ತು ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಗ್ರಾಮೀಣ ಜನರಿಗೆ ಜೀವನ ಭದ್ರತೆ ಮತ್ತು ಆಹಾರ ಭದ್ರತೆಯನ್ನು ನೀಡುವ ಸದುದ್ದೇಶದಿಂದ ನರೇಗಾವನ್ನು ಕೇವಲ ಒಂದು ಯೋಜನೆಯಾಗಿ ನೋಡದೇ ಕಾಯಿದೆಯಾಗಿ ರೂಪಿಸಿ ಜಾರಿಗೆ ತರಲಾಗಿದೆ ಎಂದು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ ಹೇಳಿದರು.
ಅವರು ಅಲಗೇರಿ ಗ್ರಾಪಂ ವ್ಯಾಪ್ತಿಯ ಘನತ್ಯಾಜ್ಯ ಘಟಕದಲ್ಲಿ ಆಯೋಜಿಸಲಾಗಿದ್ದ ನರೇಗಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಮೀಣ ಜನರಿಗೆ ತಮ್ಮ ಮೂಲಸ್ಥಳದಲ್ಲಿ ವರ್ಷಪೂರ್ತಿ ಕೆಲಸವಿರುವುದಿಲ್ಲ. ಆದ್ದರಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು, ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೆಲಸ ನೀಡಿ, ಸರ್ಕಾರ ನಿಗದಿಪಡಿಸಿದ ಕನಿಷ್ಠ ಕೂಲಿಯನ್ನು ನೀಡುವುದರ ಜೊತೆಗೆ ಗ್ರಾಮ ಪಂಚಾಯತಿಗಳಲ್ಲಿ ಸುಸ್ಥಿರ ಮತ್ತು ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನರೇಗಾ ಸಹಾಯಕ ನಿರ್ದೇಶಕ ಸುನೀಲ್ ಎಂ., ಯೋಜನೆಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಎವಿಪಿಎಸ್ ಪೇಮೆಂಟ್ ಮತ್ತು ಎನ್‌ಎಮ್‌ಎಮ್‌ಎಸ್ ಜಾರಿಗೆ ತಂದಿದೆ. ಪ್ರಪಂಚದಲ್ಲಿ ನರೇಗಾದಂತಹ ಯೋಜನೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಂತಹ ಮತ್ತೊಂದು ಯೋಜನೆಯಿಲ್ಲ ಎಂದು ಹೇಳುವ ಮೂಲಕ ನರೇಗಾ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನರೇಗಾ ಕೂಲಿಗಾರರಿಗೆ ಕಾಮಗಾರಿ ಬೇಡಿಕೆ ಪಟ್ಟಿ ಉದ್ಯೋಗ ಚೀಟಿ, ಇ-ಶ್ರಮ್ ಕಾರ್ಡ್, ಆರೋಗ್ಯ ತಪಾಸಣೆ, 100 ದಿನ ಕೂಲಿಗಾರರಿಗೆ, ಮೇಟ್ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಸಮವಸ್ತ್ರ(ಸೀರೆ)ನೀಡಿ ಸನ್ಮಾನಿಸಲಾಯಿತು. ಹಾಗೂ ತಾಲೂಕಿನ ಪ್ರತಿ ಗ್ರಾಮದಲ್ಲೂ ಸ್ವಚ್ಚತಾ ವಾಹಿನಿಯಲ್ಲಿ ನರೇಗಾ ಜಿಂಗಲ್ಸ್ ಹಾಕುವ ಮೂಲಕ ಮತ್ತು ಕರಪತ್ರ ಹಂಚುವ ಮೂಲಕ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಐಇಸಿ ಸಂಯೋಜಕರು, ತಾಲೂಕಾ ಎಮ್.ಐ.ಎಸ್ ಸಂಯೋಜಕರು, ಇಂಜಿನಿಯರ್ ಹಾಗೂ ಸಾರ್ವಜನಿಕರು ಹಾಜರಿದ್ದರು
ನರೇಗಾ ಕೇವಲ ಯೋಜನೆಯಲ್ಲ, ಗ್ರಾಮೀಣ ಜನರ ಹಕ್ಕು: ಪರಶುರಾಮ ಸಾವಂತ್
