ಅಂಕೋಲಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ನಿವೃತ್ತರಾಗುತ್ತಿರುವ ಪತ್ರಾಂಕಿತ ವ್ಯವಸ್ಥಾಪಕ ರಾಜೇಂದ್ರ ಘಡ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆಡಳಿತ ಈಶ್ವರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜೇಂದ್ರ ಘಡ್ ಅವರ ಸೇವೆ ಹಾಗೂ ಕಾರ್ಯದಕ್ಷತೆಯನ್ನು ಕೊಂಡಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯ್ಕ, ಕಛೇರಿಯ ವ್ಯವಸ್ಥಾಪಕ ರಾಜೇಂದ್ರ ಘಡ್ ಅವರು ನಮ್ಮ ಕಛೇರಿಗೆ ಒಂದು ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು. ಈ ವೇಳೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ರಾಜೇಂದ್ರ ಘಡ್ ಅವರಿಗೆ ಶಾಲು, ಫಲ-ಪುಷ್ಪ, ಪೇಟ, ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.
ಜಿಲ್ಲಾ ಉಪನಿರ್ದೇಶಕರ ಕಛೇರಿಯ ವತಿಯಿಂದ ಉಪನಿರ್ದೇಶಕರು ಹಾಗೂ ಸಿಬ್ಬಂದಿಗಳು ರಾಜೇಂದ್ರ ಘಡ್ ಅವರನ್ನು ಫಲ-ಪುಷ್ಪ, ಶಾಲು ಹೊದಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದವರು ಹಾಗೂ ಇನ್ನಿತರ ಸಂಘ-ಸಂಸ್ಥೆಯವರು ಸ್ಮರಣಿಕೆ ನೀಡಿದರು. ಮುಖ್ಯಾಧ್ಯಾಪಕ ಅಖ್ತರ ಜೆ.ಸೈಯದ್, ವೈಯಕ್ತಿಕವಾಗಿ ರಾಜೇಂದ್ರ ಘಡ್ ಅವರಿಗೆ ತಾಮ್ರದ ಬಿಂದಿಗೆಯನ್ನು ಕೊಟ್ಟು ಸನ್ಮಾನಿಸಿದರು.
ಬೀಳ್ಕೊಡಲ್ಪಟ್ಟಂತಹ ರಾಜೇಂದ್ರ ಘಡ್, ನನ್ನ ಸೇವೆಯನ್ನು ನಾನು ಉತ್ತಮವಾಗಿ ಮಾಡಿದ್ದೇನೆ ಎಂದು ಹೇಳಿ ನೀವೆಲ್ಲರೂ ಶ್ಲಾಘಿಸಿದ್ದೀರಿ. ನಿಮಗೆ ಧನ್ಯವಾದಗಳು. ನನ್ನ ನಿವೃತ್ತಿ ಜೀವನದಲ್ಲಿ ನನಗೆ ಉತ್ತಮ ಆರೋಗ್ಯ ಕರುಣಿಸಲು ತಾವುಗಳು ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಅಂಕೋಲಾ ಸಿಬ್ಬಂದಿಗಳು ರಾಜೇಂದ್ರ ಘಡ್ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯನ್ನು ಕೊಟ್ಟು ಅಂಕೋಲಾದಲ್ಲಿ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮ ನಿರ್ವಹಣೆಯನ್ನು ಪ್ರಕಾಶ ಚೌಹಾಣ ಶಿಕ್ಷಣ ಸಂಯೋಜಕರು ಮಾಡಿದರೆ, ವಂದನಾರ್ಪಣೆಯನ್ನು ಶಿಕ್ಷಣ ಸಂಯೋಜಕಿ ಸುಜಾತಾ ಗಾಂವಕರ ಮಾಡಿದರು.
ಡಯಟ್‌ನ ಹಿರಿಯ ಉಪನ್ಯಾಸಕ ಚಂದ್ರಹಾಸ ರಾಯ್ಕರ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಂದ್ರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಮೇಲ್ವಿಚಾರಕ ರಾಜೇಂದ್ರ ನಾಯ್ಕ, ಬಿ.ಆರ್.ಸಿ., ಸಿ.ಆರ್.ಸಿ., ಇ.ಸಿ.ಓ., ಉಪನಿರ್ದೇಶಕರ ಕಛೇರಿಯ ಸಿಬ್ಬಂದಿಗಳು ಹಾಗೂ ರಾಜೇಂದ್ರ ಘಡ್ ಅವರ ಧರ್ಮಪತ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.