ಹೊನ್ನಾವರ: ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಅರೇಅಂಗಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಹೊಸಾಕುಳಿ ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ ಮನವಿ ಮೇರೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 65 ಸಾವಿರ ಅತಿಕ್ರಮಣದಾರರಿದ್ದಾರೆ. 3 ತಲೆಮಾರಿನ ದಾಖಲೆ ಒದಗಿಸುವುದು ಕಷ್ಟವಾಗಿದೆ. ಸುಪ್ರಿಂಕೋರ್ಟ್ ಗೆ ಕೇಂದ್ರ ಸರ್ಕಾರದ ಮೂಲಕ ಈ ಬಗ್ಗೆ ಅಫಿಡವಿಟ್ ಸಲ್ಲಿಸಲಾಗುವುದು. ಒಂದು ತಲೆಮಾರಿನ ನಿಯಮ ಜಾರಿಯದಲ್ಲಿ ಅನೂಕೂಲವಾಗಲಿದ್ದು, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದರು.
ಶಿರಸಿ- ಸಿದ್ದಾಪುರ ಭಾಗದಲ್ಲಿ ಅತಿಕ್ರಮಣದಾರರಿಗೆ ಮನೆ ನಂಬರ್ ನೀಡಿದವರಿಗೆ ಪಂಚಾಯತಿಯಿಂದ ಮನೆ ನೀಡಬಹುದು. ಆದರೆ ನಮ್ಮ ತಾಲೂಕಿನಲ್ಲಿ ಈ ನಿಯಮ ಜಾರಿಗೊಳಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು, ಸಿಇಓ ಜೊತೆ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಕಾರ್ಯಕರ್ತರು, ಮುಖಂಡರು ಇದ್ದರು.