ಯಲ್ಲಾಪುರ: ಫೆ.22ರಿಂದ ಮಾ.2ರವರೆಗೆ ಜರುಗುವ ಯಲ್ಲಾಪುರ ಶ್ರೀಗ್ರಾಮದೇವಿ ಜಾತ್ರೆಯಲ್ಲಿ ಫೆ.2ರಿಂದ ಮಾ.1ರವರೆಗೆ ನಿರಂತರ 7 ದಿನಗಳ ಕಾಲ ಮಧ್ಯಾಹ್ನ ಹಳೆ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ ಯಲ್ಲಾಪುರ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಗಜಾನನೋತ್ಸವ ಕಮಿಟಿಯ ಜಾತ್ರಾ ಅನ್ನಸಂತರ್ಪಣಾ ಸಮಿತಿ ಅಧ್ಯಕ್ಷ ವಿ.ವಿ.ಜೋಶಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಜಾತ್ರೆಯು ಹೊರತುಪಡಿಸಿ ಕಳೆದ ಎರಡು ಜಾತ್ರೆಯಲ್ಲಿ ನಮ್ಮ ಸಮಿತಿಯ ವತಿಯಿಂದ ಅನ್ನಸಂತರ್ಪಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರತಿದಿನ ಐದು ಸಾವಿರ ಜನ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಈ ಬಾರಿ ಅನ್ನಸಂತರ್ಪಣೆಯಲ್ಲಿ ಅನ್ನ ಸಾಂಬಾರ ಪಾಯಸ ಉಪ್ಪಿನಕಾಯಿ ಚಟ್ನಿ ಇರಲಿದೆ. ಏಳು ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 1 ಗಂಟೆಯಿAದ 3 ಗಂಟೆಯವರೆಗೆ ಅನ್ನ ಪ್ರಸಾದದ ಭೋಜನ ವ್ಯವಸ್ಥೆ ಇರಲಿದೆ. ಭೋಜನ ಸ್ವೀಕರಿಸುವ ಯಾರಿಗೂ ಕೂಡ ನಿರ್ಬಂಧ ಇರುವುದಿಲ್ಲ. ಪ್ರತಿ ದಿನ 6 ರಿಂದ 7 ಸಾವಿರ ಜನ ಅನ್ನ ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ. ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್ ಗಳನ್ನು ಭೋಜನ ವ್ಯವಸ್ಥೆಯಲ್ಲಿ ಬಳಸುವುದಿಲ್ಲ. ಪ್ರಸಾದ ಭೋಜನ ವ್ಯವಸ್ಥಿತವಾಗಿ ನಡೆಯಲು ಹಾಗೂ ಎಲ್ಲರನ್ನೂ ತಲುಪಲು ದಾನಿಗಳಿಂದ ಸಹಾಯ ಸಹಕಾರ ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ಹಿರಿಯ ಕಾರ್ಯಕರ್ತರಾದ ಪಾಂಡುರಂಗ ಮಾಸ್ತರ್ ಮಾತನಾಡಿ, ನಮ್ಮ ಸಮಿತಿ ವತಿಯಿಂದ ನಿಸ್ವಾರ್ಥವಾಗಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ಮಾಡಬೇಕು ಎಂದು ನಿಶ್ಚಯಿಸಿದ್ದು, ಅನ್ನ ಸಂತರ್ಪಣೆಯಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶಚಂದ್ರ ಪಂಡರಾಪುರ ಮಾತನಾಡಿ, ಅನ್ನ ಸಂತರ್ಪಣೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಸ್ವ ಸಹಾಯ ಗುಂಪುಗಳ ಮಹಿಳೆಯರು, ಇನ್ನಿತರರು, ಬಂದು ಸೇವೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಸಮಿತಿಯ ಕಾರ್ಯಕರ್ತ ರಾಮು ನಾಯ್ಕ, ಗಣೇಶ ಉತ್ಸವ ಸಮಿತಿಯ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಗ್ರಾಮದೇವಿ ದೇವಸ್ಥಾನದ ಅರ್ಚಕರಾದ ಪರಶುರಾಮ ಆಚಾರಿ, ಸಮಿತಿಯ ಉಪಾಧ್ಯಕ್ಷ ಸಂತೋಷ ಗುಡಿಗಾರ, ಖಜಾಂಚಿ ಪ್ರಕಾಶ ರೇವಣಕರ, ಪಟ್ಟಣ ಪಂಚಾಯಿತಿ ಸದಸ್ಯ ರಾಧಾಕೃಷ್ಣ ನಾಯ್ಕ, ಜಿ.ಎಂ.ಶಾಸ್ತ್ರಿ ಪತ್ರಿಕಾಗೋಷ್ಠಿಯಲ್ಲಿದ್ದು ಮಾಹಿತಿ ನೀಡಿದರು.