ಯಲ್ಲಾಪುರ: ಗ್ರಾಮದೇವಿ ದೇವಸ್ಥಾನದ ಜಾತ್ರಾ ಸಿದ್ಧತೆ ಪಟ್ಟಣದಲ್ಲಿ ಭರದಿಂದಸಾಗಿವೆ. ಕಳೆದ ಕೆಲವು ದಿನಗಳಿಂದ ದೇವಿ ಟೆಂಪಲ್ ರಸ್ತೆ(ಡಿಟಿ ರೋಡ್)ನಲ್ಲಿ ಕೇಸರಿ ಪಟಾಕಿಗಳ ಅಳವಡಿಕೆ ಪ್ರಾರಂಭವಾಗಿದ್ದು ದೇವಿ ದೇವಸ್ಥಾನ ರಸ್ತೆಯ ನಿವಾಸಿಗಳಾದ ಹಲವಾರು ಯುವಕರು ರಾತ್ರಿ 8.30 ರಿಂದ ಬೆಳಗ್ಗೆ 4.00 ಗಂಟೆಯವರೆಗೂ ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಕೇಸರಿ ಪತಾಕಿಗಳನ್ನು ಕಟ್ಟುವಲ್ಲಿ ಮಗ್ನರಾಗಿದ್ದಾರೆ. ಗ್ರಾಮದೇವಿ ದೇವಸ್ಥಾನ ಸುತ್ತಮುತ್ತ ಹಾಗೂ ಎದುರಿನ ಕೆಲವು ಮೀಟರ್ ರಸ್ತೆಯ ಆಚೆ ಬದಿಯಿಂದ ಗಾಂಧಿ ವೃತ್ತದವರೆಗೂ ಕೇಸರಿ ಪತಾಕೆ ಅಳವಡಿಸಲಾಗುತ್ತದೆ. ಮತ್ತು ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತವನ್ನು ಜಾತ್ರೆಯ ನಿಮಿತ್ತ ವಿಶೇಷವಾಗಿ ಅಲಂಕರಿಸಲಾಗುತ್ತದೆ ಎನ್ನಲಾಗಿದೆ. ಅತ್ಯಂತ ಹತ್ತಿರ ಹತ್ತಿರದಲ್ಲಿ ಪತಾಕೆಗಳನ್ನು ಕಟ್ಟಿದ್ದು, ಕೆಲವೇ ಅಡಿಗಳ ದೂರದಿಂದ ಈ ಕೇಸರಿ ಪತಾಕಿಗಳು ಹಗಲಿನಲ್ಲಿ ಮುಗಿಲಿಗೆ ಕಟ್ಟಿದ ಕೆಸರಿ ಮೋಡಗಳಂತೆ ಗೋಚರಿಸುತ್ತವೆ. ಈಗಾಗಲೇ 120 ಮೀಟರ್ ಗೆ ಹೆಚ್ಚು ಪತಾಕಿ ಹಚ್ಚುವ ಕೆಲಸ ಮುಗಿದಿದ್ದು, ಇನ್ನೂ ಸುಮಾರು 700 ಮೀಟರಿನಷ್ಟು ಪತಾಕೆ ಹಚ್ಚುವುದು ಬಾಕಿ ಇದೆ ಎಂದು ಪತಾಕೆ ಹಚ್ಚುವ ನೇತೃತ್ವ ವಹಿಸಿಕೊಂಡಿರುವ ರಜತ್ ಬದ್ದಿ ಹೇಳಿದ್ದಾರೆ.
ಜ.31ರಂದು ಜಾತ್ರೆಯ ಪ್ರಾರಂಭದ ಪರಂಪರೆಗಳಲ್ಲಿ ಒಂದಾದ ಮೊದಲ ಮಂಗಳವಾರವನ್ನು ಯಲ್ಲಾಪುರದ ಜನತೆ ಶೃದ್ದೆ ಭಕ್ತಿಯಿಂದ ಮನೆಯಿಂದ ಹೊರಗುಳಿದು ಆಚರಿಸಿದ್ದಾರೆ. ಹಾಗೆಯೇ, ಗ್ರಾಮದೇವಿಯರು ಜಾತ್ರೆಯ ನಿಮಿತ್ತ ಮೆರವಣಿಗೆ ಹೊರಡುವ ಡಿಟಿ ರಸ್ತೆಯಿಂದ ಬಸವೇಶ್ವರ ವೃತ್ತದವರೆಗೂ ಹಾಗೂ ದೇವಿ ಜಾತ್ರೆ ಮುಗಿದು ಗ್ರಾಮದೇವಿ ಜಾತ್ರಾ ಉತ್ಸವ ಮಂಟಪದಿಂದ ಮುಂಡಗೋಡ ರಸ್ತೆಯವರೆಗಿನ ವಿಸರ್ಜನೆ ಗದ್ದುಗೆಯವರೆಗಿನ ಹಲವಾರು ಮನೆಗಳು ಸುಣ್ಣ ಬಣ್ಣ ಕಾಣತೊಡಗಿವೆ.
ಹಿರಿಯರಾದ ಬಾಲಕೃಷ್ಣ ನಾಯಕ, ರಾಜೇಂದ್ರ ಬದ್ಧಿ, ಸುಧಾಕರ ಪ್ರಭು ಮುಂತಾದವರ ಮಾರ್ಗದರ್ಶನದಲ್ಲಿ ರಜೆತ ಬದ್ಧಿ, ಅಮಿತ ಅಂಗಡಿ, ವಿಕ್ರಮ ಸಾಳಗಾಂವ್ಕರ, ಪವನ ಕಾಮತ, ಮಾರುತಿ ಪ್ರಭು, ಸಚಿನ ಬಳಕೂರು, ಸಿದ್ದಾರ್ಥ ನಂದೊಳ್ಳಿಮಠ, ಗೌರವ ಬದ್ದಿ, ಹೇಮಂತ ಗುಂಜಿಕರ, ನಾಗರಾಜ ನಾಯ್ಕ, ಮೋಹನ, ಶಿವು ಕವಳಿ, ಅವಿನಾಶ ಶಾನಭಾಗ, ಜಯಂತ ಬಾಬಶೇಟ್, ನಯನ ಇಂಗಳೆ, ಸಾಯಿಕೃಷ್ಣ ಬದ್ದಿ, ಸ್ವಪ್ನಿಲ್ ಕುದಳೆ ಮುಂತಾದವರು ರಾತ್ರಿಯಿಂದ ಬೆಳಗ್ಗೆವರೆಗೆ ಪತಾಕಿ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ.
ಯಲ್ಲಾಪುರ ಗ್ರಾಮ ದೇವಿಯರ ಜಾತ್ರಾ ಸಿದ್ಧತೆ: ರಾರಾಜಿಸುತ್ತಿವೆ ಕೇಸರಿ ಪತಾಕೆಗಳು
