ಭಟ್ಕಳ: ತಾಲೂಕಿನ ಕುಂಟವಾಣಿಯಲ್ಲಿ ಕುಂಟವಾಣಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಮಕ್ಕಳು ಕಲಿಕಾ ಹಬ್ಬದ ಓಲೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಶಿಕ್ಷಕರೇ ಡೊಳ್ಳು ಬಾರಿಸಿ ಕುಣಿಯುವುದರ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಸ್ಥಾನದಲ್ಲಿ ಸಾಧಕ ವಿದ್ಯಾರ್ಥಿಗಳು ಕುಳಿತಿದ್ದರು. ಕುಂಟವಾಣಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಶ್ರೀಮತಿ ವೀಣಾ ಸಭಾಹಿತ ಅವರ ನೇತೃತ್ವದಲ್ಲಿ ಸಿ.ಆರ್.ಪಿ ಸುರೇಶ ಮುರ್ಡೇಶ್ವರ ಅವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಉದಯ ಸುರ್ವೆ ಅವರ ಸಹಕಾರದೊಂದಿಗೆ ಕಾರ್ಯಕ್ರಮ ವ್ಯವಸ್ಥಿತವಾಗಿ ನೆರವೇರಿತು. ಸಂಪನ್ಮೂಲ ಶಿಕ್ಷಕರಾಗಿ ಆನಂದ ನಾಯ್ಕ. ಬಾಲಚಂದ್ರ ಎನ್. ಪಿ.ಎನ್.ಭಟ್, ಹೇಮಾವತಿ ಮೊಗೇರ್, ಹಾಗೂ ರಾಜಲಕ್ಷ್ಮೀ ನಾಯಕ ಭಾಗವಹಿಸಿದ್ದರು. ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೆಂಕಟೇಶ ನಾಯ್ಕ. ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಣಪತಿ ಶೆಟ್ಟಿ ಹಾಗೂ ಪಾಲಕ ಪೋಷಕರು ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಮುಖ್ಯಾಧ್ಯಾಪಕರಾದ ವೀಣಾ ಸಭಾಹಿತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಸಂಪನ್ಮೂಲ ಶಿಕ್ಷಕರ ಪರವಾಗಿ ಆನಂದ ನಾಯ್ಕ ಮಾತನಾಡಿ ಎರಡು ದಿನದ ಕಾರ್ಯಕ್ರಮದ ಪರಿಚಯ ನೀಡಿದರು. ಸಿ.ಆರ್.ಪಿ ಸುರೇಶ ಮುರ್ಡೇಶ್ವರ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸುರೇಶ ತಾಂಡೆಲ್ ಅವರು ವಂದಿಸಿದರು.