ಯಲ್ಲಾಪುರ: ನೀವು ಎಷ್ಟೆ ಅಂಕ ಪಡೆದರೂ ಕೂಡ ಇಂಗ್ಲೀಷ್, ಕಂಪ್ಯೂಟರ್, ಸಾಮಾನ್ಯ ಜ್ಞಾನ ಹಾಗೂ ಬದುಕಿನ ಶಿಕ್ಷಣವಿಲ್ಲದಿದ್ದರೆ, ಪಡೆದಿರುವ ಶಿಕ್ಷಣ ಯಾವುದಕ್ಕೂ ಪ್ರಯೋಜನಕ್ಕೆ ಬಾರದು. ಇಲ್ಲಿಯ ಕಾಲೇಜಿನ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಪರಿಪಕ್ವವಾದ ಪ್ರತಿಭೆಗಳಾಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ ಸಾಂಸ್ಕೃತಿಕ, ಕ್ರೀಡೆ, ಯುವ ರೆಡ್‌ಕ್ರಾಸ್, ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬAಧಪಟ್ಟಂತಹ ಚಟುವಟಿಕೆಗಳನ್ನು ನಡೆಸಿರುವ ಕಾರಣಕ್ಕೆ ಮುಂಡಗೋಡ ಹಾಗೂ ಯಲ್ಲಾಪುರ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾಲೇಜಿನ ಗೌರವವನ್ನು ಎತ್ತರಕ್ಕೆ ಏರಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಸೈನಿಕ, ಕೃಷಿಕ, ಕಾರ್ಮಿಕನ ಸೇವೆ ಬಹಳ ಮಹತ್ವದ್ದಾಗಿದ್ದು, ಅವರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಆಧ್ಯತೆಯಾಗಿರಬೇಕು ಎಂದರು.
ಅಂಕ ಗಳಿಕೆಯೊಂದಿಗೆ ಪ್ರಪಂಚದ ಜ್ಞಾನಕ್ಕೂ ಕೂಡ ಮಹತ್ವ ಕೊಟ್ಟಾಗ ನೀವು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು. ಈ ವರ್ಷ ನಾನು ಕೂಡ ಪರೀಕ್ಷೆ ಎದುರಿಸುತ್ತಿದ್ದು, ಈ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ನೀವು ಈಗ ಕೇವಲ ವಿದ್ಯಾರ್ಥಿಗಳಷ್ಟೆ ಅಲ್ಲ, ನನ್ನ ಭವಿಷ್ಯವನ್ನು ನಿರ್ಣಯಿಸುವ ಜವಾಬ್ದಾರಿ ಹೊಂದಿದ್ದೀರಿ ಎಂದು ಮಾರ್ಮಿಕವಾಗಿ ನುಡಿದರು.
ಸಂಸ್ಕೃತ ವಿದ್ವಾಂಸರಾದ ಡಿ.ಶಂಕರ ಭಟ್ಟ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ದೈಹಿಕವಾಗಿ ಶಕ್ತಿವಂತನಾದವನು ಮಾನಸಿಕವಾಗಿ ಕುಸಿಯಲಾರ. ಶ್ರದ್ಧೆ, ಆಸಕ್ತಿಯಿಂದ ಮೇದಾವಿತೆಯಿಂದ, ಏಕಾಗ್ರತೆಯಿಂದ ಓದುವ ಶಕ್ತಿ ಪಡೆಯಿರಿ. ಹಲವು ಸವಾಲುಗಳನ್ನು ಎದುರಿಸಿ ನಿಮ್ಮ ಗುರಿ ಸಾಧಿಸುವ ಪ್ರತಿಭಾನ್ವಿತರಾಗಿ ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಿ. ಎಸ್. ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಶಿರೀಶ ಪ್ರಭು, ಪ್ರೇಮಾನಂಧ ನಾಯ್ಕ ಹಾಗೂ ದೇವಿದಾಸ ಶಾನಭಾಗ ಇದ್ದರು. ಐಕ್ಯೂಎಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕರಾದ ಡಿ. ಜಿ. ತಾಪಸ್, ಎನ್‌ಎಸ್‌ಎಸ್ ಯೋಜನಾಧಿಕಾರಿ ರಾಮಕೃಷ್ಣ ಗೌಡ, ರೇಂಜರ್ಸ್ ಸಂಚಾಲಕರಾದ ಭವ್ಯ ಸಿ, ಸಾಹಿತ್ಯ ವೇದಿಕೆಯ ಸಂಚಾಲಕರಾದ ಸವಿತಾ ನಾಯ್ಕ ಇದ್ದರು. ಸಾಂಸ್ಕೃತಿಕ ಮತ್ತು ರೆಡ್‌ಕ್ರಾಸ್ ಸಂಚಾಲಕರಾದ ಶರತಕುಮಾರ್ ಸ್ವಾಗತಿಸಿದರು. ಪ್ಲೇಸ್‌ಮೆಂಟ್ ಸಂಚಾಲಕರಾದ ಸುರೇಖಾ ತಡವಲ್ ನಿರೂಪಿಸಿದರು. ಉಪನ್ಯಾಸಕ ರೆಡ್ಡಿ ಜನಾರ್ದನ ವಂದಿಸಿದರು.