ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆರ್ಟ್ ಫೋರಮ್ ಆಯೋಜಿಸಿದ್ದ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಯಿತು.
ವಿದ್ಯಾಲಯದ ಆವರಣದಲ್ಲಿಂದು ಸಂತೋಷ, ಶ್ರಮ, ಉತ್ಸಾಹ ,ಮತ್ತು ಕುತೂಹಲಗಳೇ ಮನೆಮಾಡಿತ್ತು. ಪರಮಾನ್ಹ( ಸಿಹಿ ಖಾದ್ಯ) ಮಿರ್ಚಿ, ಕಬ್ಬಿನಹಾಲು, ಚಿಕನ್ ದಮ್ ಬಿರಿಯಾನಿ ,ಸಿರ್ ಕೂರ್ಮ ,ಸ್ವೀಟ್ ಪಾನ್, ಪ್ರೈಡ್ ರೈಸ್, ಕೊಬ್ಬರಿ ಬಿಸ್ಕೆಟ್, ಮಾಕ್ಟೇಲ್,ರಾಯಲ್ ಪುಡ್ಡಿಂಗ್ ,ಮಸಾಲ ಮಜ್ಜಿಗೆ, ಮುರುಮುರಾ ಲಾಡು, ಕಾಯಿ ಹಲ್ವ, ಶುಂಠಿ ಸೋಡಾ, ಎಣಗಾಯ್ ಪಲ್ಯ, ಕಡ್ಲೆಕಾಯಿ ಉಸುಳಿ, ಸೇರಿ ಹಲವು ಬಾಯಲ್ಲಿ ನೀರೂರುವ ಖಾದ್ಯಗಳನ್ನು ತಯಾರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳ ತಿನಿಸು ಸವಿದು ಅತಿಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು,ಶಿಕ್ಷಕೇತರ ಸಿಬ್ಬಂದಿಗಳು ಸಂತಸ ಪಟ್ಟರು.
ಎಂಇಎಸ್ ಅಧ್ಯಕ್ಷ ಜಿ.ಎಮ್. ಹೆಗಡೆ ಮುಳಖಂಡ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ಪ್ರವೃತ್ತಿ ಕಡಿಮೆಯಾಗಿದ್ದು, ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಕುರಿತು ಹೆಚ್ಚಿನ ಗಮನವಹಿಸಿ ಆಹಾರಮೇಳದಂತಹ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಪ್ರಬಲ ಪ್ರಯತ್ನ ನಡೆಸಲಾಗುತ್ತಿದೆ. ತಮ್ಮೊಳಗೆ ಹುದುಗಿರುವ ಕೌಶಲ್ಯವನ್ನು ಅಭಿವ್ಯಕ್ತಿಗೊಳಿಸಲು ಬೇಕಾದ ವೇದಿಕೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ಒದಗಿಸಿಕೊಡಲಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಎಂಇಎಸ್ ಉಪಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಇಂತಹ ಚಟುವಟಿಕೆಯೂ ಮುಖ್ಯವಾಗಿದೆ ಮತ್ತು ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಮಯದಲ್ಲಿ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ್, ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಉಪಸ್ಥಿತರಿದ್ದರು. ಹಿಂದಿ ವಿಭಾಗ ಮುಖ್ಯಸ್ಥೆ ಡಾ. ಸುಜಾತಾ ಪಾತ್ರಪೇಕರ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.