• first
  Slide
  Slide
  previous arrow
  next arrow
 • ಪದ್ಮಶ್ರೀ ಹಾಜಬ್ಬ, ಪಹರೆ ಸಂಸ್ಥಾಪಕ ನಾಗರಾಜಗೆ ಜನಶಕ್ತಿ ಸನ್ಮಾನ

  300x250 AD

  ಕಾರವಾರ: ಕಿತ್ತಳೆ ಹಣ್ಣುಗಳನ್ನ ಮಾರಿ ಶಾಲೆ ಕಟ್ಟಿಸಿ ಬಡ ಮಕ್ಕಳಿಗೆ ಅಕ್ಷರದ ಜ್ಞಾನ ಧಾರೆ ಎರೆದ ‘ಅಕ್ಷರ ಸಂತ’, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಸತತ 8 ವರ್ಷಗಳ ಕಾಲ ಜಿಲ್ಲೆಯಾದ್ಯಂತ ಸ್ವಚ್ಛತೆಯ ಪಾಠ ಮಾಡಿ, ಗೋವಾದವರೆಗೆ ಪಾದಯಾತ್ರೆಯ ಮೂಲಕ ಸ್ವಚ್ಛ ಪರಿಸರ ಜಾಗೃತಿ ಮೂಡಿಸಲು ಕಾರಣರಾದ ಪಹರೆ ವೇದಿಕೆಯ ಸಂಸ್ಥಾಪಕ ನಾಗರಾಜ ನಾಯಕ ಅವರಿಗೆ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು.
  ಎಂಟು ವರ್ಷಗಳನ್ನ ಪೂರೈಸಿದ ನೆನಪಿನಲ್ಲಿ ಪಹರೆ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರವಾರದಿಂದ ಗೋವಾದವರೆಗೆ ‘ಸ್ವಚ್ಛತಾ ನಡಿಗೆ’- ಪಾದಯಾತ್ರೆಯ ನಿಮಿತ್ತ ಗೋವಾದ ಗಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಈ ಇಬ್ಬರು ಸಾಧಕರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸಿದರು.
  ಈ ವೇಳೆ ಮಾತನಾಡಿದ ಮಾಧವ ನಾಯಕ, ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಜನರ ನಡುವೆ ಇದ್ದರೂ ಇವರೊಬ್ಬ ಪದ್ಮಶ್ರೀ ಪುರಸ್ಕೃತರು ಎಂದೆನಿಸುವುದೂ ಇಲ್ಲ; ಅಷ್ಟು ಮುಗ್ದರು. ಬಡವನಾಗಿದ್ದರೂ ಬಡ ಮಕ್ಕಳಿಗಾಗಿ ಶಾಲೆಗಳನ್ನ ಕಟ್ಟಿಸಿದ ಇವರ ಸಾಧನೆ ಸಣ್ಣದಲ್ಲ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕೆಲವರಿಗೆ ಸಂಪತ್ತು, ಹಣ, ಐಶ್ವರ್ಯ ಎಲ್ಲವೂ ಇದ್ದರೂ ದಾನ ಮಾಡುವ ಮನಸ್ಸು ಇರುವುದಿಲ್ಲ. ಆದರೆ ಈ ಮನುಷ್ಯ ಕಿತ್ತಳೆ ಮಾರಿ ಹಣ ಸಂಗ್ರಹಿಸಿ ಶಾಲೆ ಕಟ್ಟಿರುವುದು ಮಾದರಿ ಕಾರ್ಯ. ಇವರ ಪತ್ನಿ 20 ವರ್ಷಗಳಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದರೂ, ದುಃಖದ ನಡುವೆಯೂ ಯಾರೂ ಮಾಡಲಾಗದ ವಿಶೇಷ ಸಾಧನೆಯನ್ನ ಮಾಡಿದ್ದಾರೆ. ಇವರೊಬ್ಬ ದೇವಮಾನವ. ಇವರು ನಮಗೆಲ್ಲರಿಗೂ ಮಾದರಿ. ನಾವು ಅವರಂತಾಗದಿದ್ದರೂ ಅವರ ಕೆಲ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
  ಪಹರೆ ವೇದಿಕೆ ಸ್ವಚ್ಛತೆ ಮಾಡುತ್ತಾ ಎಂಟು ವರ್ಷ ಪೂರೈಸಿರುವುದು ಖುಷಿಯ ಸಂಗತಿ. ಆದರೆ ಇದಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧ ಕೂಡ ಹೋರಾಡಿತ್ತು. ಹಣ ಪಡೆದು ಮತ ಹಾಕಬೇಡಿ ಎಂದು ಅಭಿಯಾನ ಮಾಡಲಾಗಿತ್ತು. ಈಗ ಭ್ರಷ್ಟಾಚಾರ ನಿರ್ಮೂಲನೆಯೇ ಸಾಹಸವೆಂಬಷ್ಟರ ಮಟ್ಟಿಗೆ ಬೃಹತ್ತಾಗಿ ಬೆಳೆದಿದೆ. ಪಹರೆ ವೇದಿಕೆಯು ಎಂಟು ವರ್ಷಗಳಿಂದ ಹೇಗೆ ಊರಿನ ಕಸವನ್ನೆಲ್ಲ ಗುಡಿಸಿ ಸ್ವಚ್ಛತೆ ಮಾಡುತ್ತಿದೆಯೋ, ಹಾಗೆಯೇ ಸಮಾಜದಲ್ಲಿನ ಭ್ರಷ್ಟಾಚಾರವನ್ನೂ ಗುಡಿಸಿ ಸ್ವಚ್ಛಗೊಳಿಸಲು ಮುಂದಾಗಲಿ ಎಂದು ಆಶಿಸುವೆ ಎಂದ ಅವರು, ಸಂಸ್ಥಾಪಕ ನಾಗರಾಜ ನಾಯಕ ಅವರ ಕುರಿತೂ ಶ್ಲಾಘಿಸಿದರು.
  ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ಬಾಬು ಶೇಖ್, ರಾಮಾ ನಾಯ್ಕ, ಎಲ್.ಎಸ್.ಫರ್ನಾಂಡಿಸ್, ಖೈರುನ್ನಿಸಾ ಶೇಖ್, ಶ್ರೀಕಾಂತ ನಾಯ್ಕ, ರಾಮೇಶ್ ಗುನಗಿ ಮುಂತಾದವರು ಇದ್ದರು. ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ, ನಗರಸಭಾ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ ಶುಭಹಾರೈಸಿದರು.

  300x250 AD
  Share This
  300x250 AD
  300x250 AD
  300x250 AD
  Back to top