ಕುಮಟಾ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ತಹಸೀಲ್ದಾರ್ ವಿವೇಕ ಶೇಣ್ವಿ ಸೇರಿದಂತೆ ಕಚೇರಿಯ ಸಿಬ್ಬಂದಿಯು ಚೌಡಯ್ಯ ಅವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಗೈದರು. ನಂತರ ಮಾತನಾಡಿದ ತಹಸೀಲ್ದಾರರು, ನಮ್ಮ ಜೀವನವೇ ಕರ್ಮ ಸಿದ್ಧಾಂತದ ಮೇಲೆ ನಿಂತಿದೆ. ಕರ್ಮದಂತೆ ಫಲ. ಮೇಲು ಕೀಳು ಎಂಬ ಬೇಧ ಭಾವವನ್ನು ತೊರೆದು ಬಡವರಿಗೆ ನಿರ್ಗತಿಕರಿಗೆ ಸಹಾಯ, ಸಹಕಾರ ಮಾಡಿ ಜೀವನದಲ್ಲಿ ಒಳ್ಳೆತನದಿಂದ ಪುಣ್ಯ ಗಳಿಸೋಣ, ಆ ಮೂಲಕ ನಿಜಶರಣ ಅಂಬಿಗರ ಚೌಡಯ್ಯನವರ ಗುರಿ, ಧ್ಯೇಯಗಳಿಗೆ ಜೀವ ತುಂಬೋಣ ಎಂದರು.
ವನ್ನಳ್ಳಿ ಪ್ರೌಢಶಾಲಾ ಶಿಕ್ಷಕ ಎಸ್.ಕೆ.ಅಂಬಿಗ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಜಗದೀಶ್ ಹರಿಕಂತ್ರ, ಜೈವಿಠಲ್ ಕುಬಾಲ್ ಮಾತನಾಡಿದರು. ಈ ಸಂದರ್ಭದಲ್ಲಿ ಕಲಭಾಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಕುಬಾಲ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗಿಗೆ ಪೂರಕವಾದ ನೃತ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅಂಕಿತಾ ಹೊಸ್ಕಟ್ಟ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ವಸಂತ್ ಸಾಮಂತ ಸ್ವಾಗತಿಸಿದರು. ಆರ್.ಕೆ.ಅಂಬಿಗ ದೀವಗಿ ನಿರೂಪಿಸಿದರು. ಶಿರಸ್ತೇದಾರ್ ಉಷಾ ನಾಯ್ಕ ವಂದಿಸಿದರು. ಸಮಾಜದ ಮುಖಂಡರುಗಳಾದ ಗಣೇಶ ಅಂಬಿಗ, ನಾಗರಾಜ ಹಿಣಿ, ಉಮಕಾಂತ ಹೊಸ್ಕಟ್ಟ, ಶೀಧರ ಹರಿಕಂತ್ರ ಕಿಮಾನಿ, ಭಾಸ್ಕರ್ ಅಂಬಿಗ, ಸುರೇಶ ಅಂಬಿಗ ಭಟ್ಕಳ, ರಾಜೇಶ ಅಂಬಿಗ ಹಾಗೂ ಶಿವಾನಂದ ಅಳ್ಳೊಳ್ಳಿ, ತಾರಾ ನಾಯ್ಕ ಇನ್ನಿತರರು ಇದ್ದರು.