ಶಿರಸಿ: ಭೂಮಾಪನ ಇಲಾಖೆಯಲ್ಲಿ ಸರಕಾರಿ ಭೂಮಾಪಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದ ಸಾವಿರಾರು ಸರ್ವೆ ಪ್ರಕರಣಗಳು ಬಾಕಿ ಉಳಿಯುವಂತಾಗಿದೆ.
ಈಗಂತೂ ಸರ್ವೆ ಇಲಾಖೆಯ ಮೇಲೆ ಒತ್ತಡ ಜಾಸ್ತಿಯಿದೆ. ಸರ್ವೆಗಾಗಿ ತಿಂಗಳಿನಿಂದ ತಿಂಗಳಿಗೆ ಅರ್ಜಿಗಳು ಹೆಚ್ಚಾಗುತ್ತಿದ್ದರೂ, ಅದನ್ನು ಪೂರೈಸುವುದು ಇಲಾಖೆಗೆ ಸವಾಲಾಗಿದೆ. ಅದರಲ್ಲೂ ಅರ್ಧದಷ್ಟು ಪ್ರಮಾಣದಲ್ಲಿಯೂ ಸರಕಾರಿ ಭೂಮಾಪಕರು ಇಲ್ಲದಿರುವುದು ಸಮಸ್ಯೆ ತಂದೊಡ್ಡಿದೆ.
ಶಿರಸಿ ತಾಲೂಕು ಅಷ್ಟೇ ಅಲ್ಲದೇ ಇಡೀ ಜಿಲ್ಲೆಯಲ್ಲೂ ಇದೇ ಸಮಸ್ಯೆ ಇದೆ. ಅಂತೂ ಇಂತೂ ಇರುವ ಸಿಬ್ಬಂದಿಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಲೈಸೆನ್ಸ್ ಪಡೆದ ಖಾಸಗಿ ಭೂಮಾಪಕರಿದ್ದರೂ ಅವರನ್ನು ಸಹ ಎರವಲಾಗಿ ಕೊರತೆ ಇರುವ ತಾಲೂಕುಗಳಲ್ಲಿ ನಿಯೋಜಿಸಲಾಗುತ್ತಿದೆ. ಇದರಿಂದ ಜಮೀನು ಕ್ರಯ, ದಾನ, ಕೋರ್ಟ್ ಡಿಕ್ರಿ ಸಂಬಂಧಿಸಿ 11ಇ ನೋಂದಣಿಗೆ, ಭೂ ಪರಿವರ್ತನೆಗೆ, ಪೋಡಿ, ಗಡಿಗುರುತು, ಇ ಸ್ವತ್ತು ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ ಪ್ರಕರಣಗಳ ಸರ್ವೆ ವಿಳಂಬವಾಗುತ್ತಿದೆ. ಇನ್ನು ತಾಲೂಕಿನಲ್ಲಿ 560 ಸರಕಾರಿ ಕೆರೆಗಳ ಸರ್ವೆ ಮಾಡಬೇಕಿದ್ದು ಅದರಲ್ಲಿ 286 ಕೆರೆಗಳ ಸರ್ವೆ ಆಗಿದ್ದು 280 ಕೆರೆ ಆಗಬೇಕಿದೆ.
ಮುಖ್ಯವಾಗಿ ಜಿಲ್ಲೆಯವರು ಸರಕಾರಿ ಭೂಮಾಪಕರಾಗಿರುವುದು ಸ್ವಲ್ಪ ಕಡಿಮೆಯಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಉತ್ತರಕನ್ನಡಕ್ಕೆ ನಿಯೋಜನೆಯಾದರೂ ಹೆಚ್ಚಿನವರು ಕೆಲವು ತಿಂಗಳು ಇಲ್ಲಿ ಕಾರ್ಯ ಮಾಡಿ ಪುನಃ ತಮ್ಮ ಸ್ವಂತ ಊರಿನ ಕಡೆಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಇದರಿಂದ ಕೊರತೆ ನಿಭಾಯಿಸುವುದು ಕಷ್ಟವಾಗಿದೆ ಎಂದು ಗೊತ್ತಾಗಿದೆ.
ಶಿರಸಿ ತಾಲೂಕಿನಲ್ಲಿ 17ಭೂಮಾಪಕರ ಮಂಜೂರಿ ಹುದ್ದೆಯಿದ್ದು ಅದರಲ್ಲಿ 8ಮಂದಿ ಭೂಮಾಪಕರಿದ್ದಾರೆ. ಅವರಲ್ಲಿ ಒಬ್ಬರು ಡೆಪ್ಯೂಟೇಶನ್ ಮೇಲೆ ಬೇರೆಡೆ ನಿಯೋಜನೆಯಾಗಿದ್ದಾರೆ. ಇನ್ನು ಲೈಸೆನ್ಸ್ ಪಡೆದ ಖಾಸಗಿ ಸರ್ವೇಯರ್ 8 ಮಂದಿಯಿದ್ದರೂ ಅವರಲ್ಲಿಯೂ ಮೂರು ಮಂದಿ ಬೇರೆಬೇರೆ ತಾಲೂಕುಗಳಲ್ಲಿ ನಿಯೋಜಿಸಲಾಗಿದೆ. ಇನ್ನು ಸೂಪರ್‌ವೈಸರ್ ಹುದ್ದೆ 3 ಮಂಜೂರಿಯಿದ್ದು ಅದರಲ್ಲಿ ಎರಡು ಖಾಲಿಯಿದೆ. ಹೀಗಾಗಿ ಇರುವ ಸರ್ವೆಯರ್‌ಗಳೇ ಮೇಲ್ವಿಚಾರಕ ಸೇರಿದಂತೆ ವಿವಿಧ ಜವಾಬ್ದಾರಿಯನ್ನೂ ನಿಭಾಯಿಸುವ ಸ್ಥಿತಿಯಿದೆ. ಹೀಗಾಗಿ ಇಲ್ಲಿಗೆ ಬರುವ ಅರ್ಜಿಗಳಿಗೆ ತಕ್ಕಂತೆ ವೇಗವಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಶಿರಸಿ ತಾಲೂಕಿನಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 11ಇಗೆ ಸಂಬಂಧಿಸಿ 847 ಅರ್ಜಿಗಳು ಪೆಂಡಿಂಗ್ ಇದೆ. ಇನ್ನು ಭೂ ಪರಿವರ್ತನೆಗೆ ಸಂಬಂಧಪಟ್ಟು 82 ಹಾಗು ತತ್ಕಾಲ ಪೋಡಿ ಅರ್ಜಿಗಳು 296 ಬಾಕಿಯಿದೆ. ಇನ್ನು ಹದ್ದಬಸ್ತ್, ಗ್ರಾಮಠಾಣಾ ಆಸ್ತಿಗೆ ಸಂಬಂಧಿಸಿ ಸರ್ವೆ ಒಳಗೊಂಡು ತಾಲೂಕಿನಲ್ಲಿ ಒಟ್ಟು 1344ಅರ್ಜಿಗಳು ವಿಲೇವಾರಿ ಆಗಬೇಕಿದೆ ಎನ್ನುತ್ತವೆ ಮೂಲಗಳು.
ಭೂಮಾಪನ ಇಲಾಖೆ ಸರಕಾರ ಆದಾಯ ಬರುವ ಇಲಾಖೆಯಾದರೂ ಅಗತ್ಯದಷ್ಟು ಸಿಬ್ಬಂದಿಗಳನ್ನು ನಿಯೋಜಿಸಲು ಯಾಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ನಗರದ ಎರಡು ಎಕರೆ ಸರ್ವೆಗೆ ಸಂಬಂಧಿಸಿ 2500 ರೂ., ಗ್ರಾಮೀಣ ಭಾಗದಲ್ಲಿ 1200ಕ್ಕೂ ಶುಲ್ಕ ಹಾಕಲಾಗುತ್ತಿದೆ. ಹೀಗಿರುವಾಗ ದೊಡ್ಡ ಪ್ರಮಾಣದಲ್ಲಿ ಸರ್ವೆ ಕಾರ್ಯಕ್ಕೆ ಬೇಡಿಕೆ ಇರುವಾಗ ಸರಕಾರ ಸಿಬ್ಬಂದಿ ತುಂಬುವುದಕ್ಕೂ ಸರಕಾರ ಆಸಕ್ತಿ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.