ಹೊನ್ನಾವರ: ತಾಲೂಕಿನ ಕಡ್ನೀರು ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ಜ.23ರಂದು ವಿಜೃಂಭಣೆಯಿಂದ ನಡೆಯಲಿದೆ.
ಶ್ರೀದೇವರ ಸನ್ನಿಧಿಯಲ್ಲಿ ಜ.16ರಿಂದ ಭಜನಾ ಕಾರ್ಯಕ್ರಮ ಆರಂಭವಾಗಿದ್ದು, ಜ.22ರಂದು ವಿವಿಧ ಭಜನಾ ತಂಡದವರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ಜ.23 ರಂದು ಭಜನಾ ಮಂಗಲ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ಕಡ್ನೀರು ಭಾಗದ ಪ್ರಮುಖ ಸ್ಥಳಗಳಿಗೆ ಭಜನಾ ಮೆರವಣಿಗೆ ನಡೆಯಲಿದೆ.
ಬೆಳಿಗ್ಗೆಯಿಂದ ಶ್ರೀ ದೇವರಿಗೆ ವಿವಿಧ ಸೇವೆಗಳು ನಡೆಯುವುದು. ಜ.24 ರಂದು ಸಮೀಪದ ಶ್ರೀ ದಕ್ಷಿಣಕಾಳಿ ಅಮ್ಮನವರು ಹಾಗೂ ಶ್ರೀ ಗೋಳಿಬೀರಪ್ಪ ಪರಿವಾರ ದೇವರ ಸನ್ನಿಧಿಯಲ್ಲಿ ಮುತ್ತೈದೆಯರಿಂದ ಅರಿಶಿನ-ಕುಂಕುಮ ಕಾರ್ಯಕ್ರಮ ಅದ್ಧೂರಯಾಗಿ ನಡೆಯಲಿದೆ. ಬೆಳಿಗ್ಗೆಯಿಂದ ದೇವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಜ.24ರಂದು ರಾತ್ರಿ ಸರಿಯಾಗಿ 9 ಗಂಟೆಗೆ ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವಾರದಲ್ಲಿ ಶ್ರೀ ಸಿಗಂದೂರು ಚೌಡಮ್ಮದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ‘ಭೂ ಕೈಲಾಸ’ ಮತ್ತು ‘ಚಕ್ರ ಚಂಡಿಕೆ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.