Slide
Slide
Slide
previous arrow
next arrow

ಪಠ್ಯಗಳಲ್ಲಿ ಆದರ್ಶವಾದುದನ್ನು ಅಳವಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ: ಗಿರೀಶ ಹೆಬ್ಬಾರ್

300x250 AD

ಸಿದ್ದಾಪುರ: ರಾಜಕೀಯದ, ರಾಜಕೀಯ ನಾಯಕರ ತಪ್ಪು ನಿರ್ಧಾರದಿಂದಾಗಿ ಭಾರತ ಭೂಪಟದಲ್ಲಿದ್ದ ಸ್ಥಳಗಳು ಪರವಶವಾಗಿವೆ. ಉಗ್ರಗಾಮಿ ಕೃತ್ಯ ನಮ್ಮಲ್ಲಿಯೇ ನಡೆಯುತ್ತಿದೆ. ನಮ್ಮ ಅರಿವಿಗೆ ಬಾರದಂತೆ ಅವ್ಯಾಹತವಾಗಿ ಮತಾಂತರ ನಡೆಯುತ್ತಿದೆ. ಪರಿಸರ ಜಾಗೃತಿಯ ಕೊರತೆಯಿಂದಾಗಿ ಪರಿಸರ ನಾಶವಾಗುತ್ತಿದೆ. ನಮ್ಮ ಪಠ್ಯಗಳಲ್ಲಿ ಆದರ್ಶವಾದುದನ್ನು ಅಳವಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಿರೀಶ ಹೆಬ್ಬಾರ್ ಹೇಳಿದ್ದಾರೆ.
ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸಂಘಟಿಸಿದ್ದ ಹಿಂದೂ ಚೈತನ್ಯ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು. ಪಕ್ಕಾ ರಾಜಕೀಯವನ್ನೇ ಮಾಡುವವರು ಸಾರ್ವಜನಿಕವಾಗಿ ಒಂದು ರೀತಿ, ವೈಯಕ್ತಿಕವಾಗಿ ಒಂದು ರೀತಿ ನಡವಳಿಕೆ ತೋರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸಂಘದ ಶಾಖೆಗಳಲ್ಲಿ ಸಂಸ್ಕಾರ ಪಡೆದ ಸ್ವಯಂ ಸೇವಕರು ಕಾಲಕಾಲದ ಅಗತ್ಯತೆಯನ್ನು ತುಂಬುತ್ತಾ ಬಂದಿದ್ದಾರೆ. ಪ್ರಕೃತಿ ವಿಕೋಪ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂದು ನಮ್ಮಲ್ಲಿಯ ಕೊರತೆಗಳೆಲ್ಲವನ್ನೂ ಸರಿಪಡಿಸುವ ದಿನ ಎದುರಾಗಿದೆ. ಪ್ರತೀ ಊರುಗಳಲ್ಲಿಯೂ ನಮ್ಮ ಸಂಘಟನೆ ತಲುಪಬೇಕು. ನಮ್ಮಲ್ಲಿಯ ಅವ್ಯಕ್ತ ಚೇತನದ ಸದುಪಯೋಗ ಮಾಡಿಕೊಳ್ಳುವಲ್ಲಿ ಕಾರ್ಯತತ್ಪರರಾಗಬೇಕು. ಬದಲಾದ, ಸಮಾಜಮುಖಿ ಚಿಂತನೆಯ ವ್ಯಕ್ತಿಗಳು ಸೃಷ್ಟಿಯಾಗುವಂತೆ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ನಾಯ್ಕ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಕುಂದು ಕೊರತೆ ನೀಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಸಂಘ ಪರಿವಾರದಲ್ಲಿ ತೊಡಗಿಕೊಂಡವರಿಂದು ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಪನ್ನ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದಾರೆ. ಸೈನಿಕರು ದೇಶ ರಕ್ಷಣೆ ಮಾಡಿದಂತೆ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.
ತಾಲೂಕಾ ಸಂಘಚಾಲಕ ಸೋಮಶೇಖರ ಗೌಡರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ಸಾಹಿತಿಗಳಾದ ಆರ್.ಕೆ.ಹೊನ್ನೇಗುಂಡಿ, ಪ್ರೊ.ಕೆ.ಎ.ಭಟ್ಟ, ಎನ್.ವಿ.ಹೆಗಡೆ ಮುತ್ತಿಗೆ, ಜಯವಂತ ಶಾನಭಾಗ, ಅರುಣ ತವದಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಧ್ವಜಾರೋಹಣ, ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾಶೀನಾಥ ಪೈ ಸ್ವಾಗತಿಸಿದರು. ಸುಧೀರ ಬೇಂಗ್ರೆ ದೇಶ ಭಕ್ತಿಗೀತೆ ಹಾಡಿದರು. ಈಶ್ವರ ರಾಗಿಹೊಸಳ್ಳಿ ನಿರ್ವಹಿಸಿದರು. ಲಕ್ಷ್ಮಿಕಾಂತ ಪೈ ವಂದಿಸಿದರು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.


ಕೋಟ್…
ಭಾರತವು ವಿಶ್ವಗುರುವಾಗುವ ಕನಸನ್ನು ಸಂಘಪರಿವಾರದ ಹಿರಿಯರು ಕಂಡಿದ್ದರು. ಅವರ ಸಂಕಲ್ಪವನ್ನು ಸಿದ್ಧಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು ದೇಶ ಕಟ್ಟುವ ದಿಸೆಯಲ್ಲಿ ಅಪಾರ ತ್ಯಾಗ ಮಾಡಿದ್ದರು. ಆದರೆ ಸ್ವಾತಂತ್ರ್ಯಾ ನಂತರ ಆಗಿದ್ದೇ ಬೇರೆ.
• ಗಿರೀಶ ಹೆಬ್ಬಾರ್, ಆರ್‌ಎಸ್‌ಎಸ್ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ

300x250 AD
Share This
300x250 AD
300x250 AD
300x250 AD
Back to top