ಭಟ್ಕಳ: ಮಂಗಳೂರಿನ ಎಜೆ ಆಸ್ಪತ್ರೆ ಸಹಯೋಗದಲ್ಲಿ ಜ.24ರಂದು ತಾಲೂಕು ಆಸ್ಪತ್ರೆಯಲ್ಲಿ ಕಿಡ್ನಿ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇಶದಲ್ಲಿ ಅಂಗಾಂಗ ಜೋಡಣೆಯ ಖ್ಯಾತಿ ಹೊಂದಿರುವ ಡಾ.ಪ್ರಶಾಂತ ಮಾರ್ಲ ಶಿಬಿರದಲ್ಲಿ ಹಾಜರಿರಲಿದ್ದು, ಅವರು ಅಂಗಾಂಗಗಳ ದಾನ ಹಾಗೂ ಜೋಡಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಂಗಾಂಗಗಳ ದಾನಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ತೀರಾ ಇದ್ದು, ಈ ಶಿಬಿರದಿಂದ ಸಹಾಯಕವಾಗಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವುದರಿಂದ ಇನ್ನೊಂದು ವ್ಯಕ್ತಿಗೆ ಜೀವದಾನ ನೀಡಬಹುದಾಗಿದೆ. ರಕ್ತದಾನ, ನೇತ್ರದಾನದಂತೆ ಅಂಗಾಂಗ ದಾನಗಳ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಮೂಡಿಸಿದರೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಮುಂದೆ ಬರುತ್ತಾರೆ ಎಂದರು.
ಎ.ಜೆ. ಆಸ್ಪತ್ರೆ ವೈದ್ಯ ಡಾ.ಪ್ರೀತಮ್ ಮಾತನಾಡಿ, ಜ.24ರಂದು ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೂತ್ರಪಿಂಡ ಶಸ್ತ್ರ ಚಿಕಿತ್ಸಕ ಡಾ.ಪ್ರಶಾಂತ ಮಾರ್ಲ ಹಾಗೂ ಪ್ಲಾಸ್ಟಿಕ್ ಸರ್ಜನ್ ಡಾ.ದಿನೇಶ ಕದಂ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮೂತ್ರಪಿಂಡ, ಮೂತ್ರ ಕೋಶ ಕಲ್ಲು ಹಾಗೂ ಸೋಂಕುಗಳಿಗೆ ಸಂಬಂಧಪಟ್ಟ ಪರೀಕ್ಷೆ ಹಾಗೂ ಚಿಕಿತ್ಸೆ ನಡೆಸಿ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು. ಅದೇ ರೀತಿ ಸೀಳುತುಟಿ, ಸೀಳು ಬಾಯಿ ಹಾಗೂ ಸುಟ್ಟಗಾಯಗಳಿಗೆ ಉಚಿತ ತಪಾಸಣೆ ಅಗತ್ಯವಿದ್ದಲ್ಲಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಜೆ ಆಸ್ಪತ್ರೆ ಪ್ರತಿನಿಧಿ ಅಶ್ರಫ್ ಇದ್ದರು.