ಜೋಯಿಡಾ: ಚಟುವಟಿಕೆಗಳ ಮೂಲಕ ಕಲಿತಾಗ ಮಾತ್ರ ಅದು ಅನುಭವವಾಗಿ ಕಲಿಕೆ ಗಟ್ಟಿಯಾಗುತ್ತದೆ. ಕೇಳಿ ತಿಳಿದ ವಿಷಯಗಳಿಗಿಂತ ಮಾಡಿ ಕಲಿತ ಸಂಗತಿ ಬಹುಕಾಲ ನೆನಪಿನಲ್ಲುಳಿಯುತ್ತದೆ. ಅರಿವು ಆನಂದವಾದಾಗ ಮಾತ್ರ ಆಸಕ್ತಿದಾಯಕ ಕಲಿಕೆ ಸಾಧ್ಯವಾಗುತ್ತದೆ. ಕಲಿಕಾ ವಾತಾವರಣವನ್ನು ಇಷ್ಟೊಂದು ಚಂದವಾಗಿ ಮಾಡಿ ‘ಕಲಿಕಾ ಹಬ್ಬ ‘ ಮಾಡುತ್ತಿರುವುದು ನಮಗೂ ಮಕ್ಕಳಾಗಿ ನಿಮ್ಮೊಂದಿಗೆ ಬೆರೆಯೋಣ ಅನಿಸುತ್ತಿದೆ ಎಂದು ಅಣಶಿ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇವಳಿ ಅಭಿಪ್ರಾಯಪಟ್ಟರು.
ಸಮೂಹ ಸಂಪನ್ಮೂಲ ಕೇಂದ್ರ ಅಣಶಿ ಹಾಗೂ ಸರಕಾರಿ ಪ್ರೌಢ ಶಾಲೆ ಅಣಶಿ ಇವರ ಸಂಯುಕ್ತ ಆಶ್ರಯದಲ್ಲಿ ಅಣಶಿ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಅಣಶಿ ಕ್ಲಸ್ಟರ್ ಮಟ್ಟದ ಎರಡು ದಿನಗಳ ‘ಕಲಿಕಾ ಹಬ್ಬ’ ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬದ ಪರಿಕಲ್ಪನೆ ನೋಡಿದರೆ ಇದು ಮಕ್ಕಳು ಆಡುತ್ತಾ ಕಲಿಯಲು ಪೂರಕವಾಗಿದ್ದು; ಆಡುತ್ತಾ ಕಲಿ, ಮಾಡುತ್ತಾ ತಿಳಿ ಎಂಬ ಮನೋವೈಜ್ಞಾನಿಕ ತತ್ವವನ್ನು ಆಧರಿಸಿದಂತೆ ಕಾಣುತ್ತದೆ. ಇಂತಹ ಸುಂದರ ಕಾರ್ಯಕ್ರಮ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವುದೇ ನಮಗೆ ಅಪಾರ ಖುಷಿ ನೀಡಿದೆ ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸುರೇಶ ಗಾಂವಕರ ಮಾತನಾಡಿ, ಹಾಡು, ಕಥೆ, ಪರಿಸರ ಅಧ್ಯಯನ, ವೈಜ್ಞಾನಿಕ ಪ್ರಯೋಗ, ಕ್ರಾಫ್ಟ್, ಸಮುದಾಯದ ಜ್ಞಾನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಅತ್ಯಂತ ಸಂತಸದಾಯಕವಾಗಿ ಕಲಿಕಾ ಹಬ್ಬದಲ್ಲಿ ಕೈಗೊಳ್ಳಲಾಗುತ್ತದೆ. ಇಲ್ಲಿರುವ ಅನುಭವಿ ಸಂಪನ್ಮೂಲ ಶಿಕ್ಷಕರು ನಿಮಗೆ ಹಬ್ಬದ ರಸದೌತಣ ನೀಡಲಿದ್ದು ನಮ್ಮ ಅಮೂಲ್ಯ ಸಂಪತ್ತಿನಂತಿರುವ ನೀವು ಸಂತೋಷದಿಂದ ಸಂಭ್ರಮಿಸಿದರೆ ಇಲಾಖೆಯ ಆಶಯ, ಸಮುದಾಯದ ನಿರೀಕ್ಷೆ ಸಾರ್ಥಕವಾಗುತ್ತದೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ದಯಾನಂದ, ಮಗು ಕಲಿತದ್ದನ್ನು ಪೋಷಕರಿಗೆ, ಸಮುದಾಯಕ್ಕೆ ಹಂಚಿಕೊಳ್ಳುವ ಒಂದು ಸಂಭ್ರಮದ ಆಚರಣೆಯಾಗಿ ‘ಕಲಿಕಾ ಹಬ್ಬ’ ಮಾಡುತ್ತಿರುವುದಕ್ಕೆ ಶಿಕ್ಷಣ ಇಲಾಖೆಯ ಎಲ್ಲಾ ಭಾಗೀದಾರರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ನಮ್ಮ ಮಕ್ಕಳು ನಮ್ಮ ಶಿಕ್ಷಕರ ಮೂಲಕ ಕಲಿತ ಅರಿವನ್ನು ನಾವಿನ್ಯ ರೀತಿಯಲ್ಲಿ, ವೈಜ್ಞಾನಿಕವಾಗಿ, ಕ್ರಿಯಾಶೀಲ ಚಟುವಟಿಕೆಗಳ ಮುಖೇನ ಅಭಿವ್ಯಕ್ತಿಸಲು ಈ ಹಬ್ಬ ವೇದಿಕೆಯಾಗಲಿದೆ ಎಂಬುದನ್ನು ತಿಳಿದಾಗ ನಾವು ಓದುವಾಗಿನ ಆ ದಿನಗಳಿಗೂ ಇಂದಿಗೂ ಶೈಕ್ಷಣಿಕ ಸಂವಹನ ಕ್ರಿಯೆ ಎಷ್ಟೊಂದು ಬದಲಾಗಿದೆ ಎಂದೆನಿಸಿತು. ಕಾಡಿನ ನಡುವೆ ಇದ್ದರೂ ಅಣಶಿಯ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂಬುದಕ್ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಕಳೆದ ಮೂರು ವರ್ಷಗಳಿಂದ ಪ್ರತಿಶತ ನೂರರಷ್ಟು ಬಂದಿರುವುದೇ ಸಾಕ್ಷಿ. ಮಕ್ಕಳ ಅರಿವನ್ನು ಹಿಗ್ಗಿಸುವ ಕಾರ್ಯದಲ್ಲಿ ನಮ್ಮ ಅರಣ್ಯ ಇಲಾಖೆ ಸದಾ ಶಾಲೆಗಳ ಜೊತೆಯಿರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ್ ಮಾತನಾಡಿ, ಮಾಡು- ಆಡು, ಕಾಗದ ಕತ್ತರಿ ಬಣ್ಣ, ಊರು ತಿಳಿಯೋಣ, ಹಾಡು- ಆಡು ಎಂಬ ನಾಲ್ಕು ಗುಂಪುಗಳಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಹಬ್ಬದಲ್ಲಿ ಪ್ರತಿ ಮಗು ಎಲ್ಲಾ ಚಟುವಟಿಕೆಗಳಲ್ಲಿಯೂ ಖುಷಿಯಿಂದ ಪಾಲ್ಗೊಳ್ಳುವಂತೆ ರೂಪಿಸಲಾಗಿದೆ. ಈ ಕಲಿಕಾ ಹಬ್ಬ ಮಕ್ಕಳಾದ ನಿಮ್ಮ ಹಬ್ಬ. ನೀವುಗಳೆಲ್ಲ ಇದರಲ್ಲಿ ಒಂದಾಗಿ ಬೆರೆತು ಕೂಡಿ ಆಡಿ ಸಂಭ್ರಮಿಸುವುದನ್ನು ನೋಡಲು ನಾವೆಲ್ಲರೂ ಕಾತುರರಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಗಜಾನನ ಕಾಜೂಗಾರ, ಮಕ್ಕಳ ಕಲಿಕೆಯ ಅಭಿವ್ಯಕ್ತಿಗೆ ಈ ಹಬ್ಬ ಅತ್ಯುತ್ತಮ ಅವಕಾಶವಾಗಿದೆ. ಪಾಲಕರಾದ ನಾವೆಲ್ಲರೂ ಎರಡೂ ದಿನ ಮಕ್ಕಳ ಜೊತೆಯಲ್ಲಿ ಇದ್ದು ಅವರ ಹಾಡು, ಆಟ, ಪ್ರಯೋಗ, ಸಂದರ್ಶನ, ಕ್ರಾಫ್ಟ್ ಇತ್ಯಾದಿ ಚಟುವಟಿಕೆಗಳನ್ನು ನೋಡಿ ಖುಷಿ ಪಡೋಣ. ಉತ್ತಮ ಕಾರ್ಯಕ್ರಮ ಆಯೋಜಿಸಲು ಸಂಪೂರ್ಣವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ಶಿಕ್ಷಕ ಬಳಗಕ್ಕೆ ಎಲ್ಲರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದರು.
ಕ್ಲಸ್ಟರ್‌ನ ವಿವಿಧ ಪ್ರಾಥಮಿಕ, ಪ್ರೌಢಶಾಲೆಗಳ 120 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಹಬ್ಬವನ್ನು ಪ್ರೌಢಶಾಲೆಯ ವಿದ್ಯಾರ್ಥಿನಿಯರ ಆಶಯ ಗೀತೆಯೊಂದಿಗೆ ಪ್ರಾರಂಭವಾಯಿತು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿನೋದ ನಾಯಕ ಸ್ವಾಗತಿಸಿದರು. ಸಿ.ಆರ್.ಪಿ. ಭಾಸ್ಕರ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೃಷ್ಣಮೂರ್ತಿ ನಾಯಕ ವಂದಿಸಿದರು. ಶಿಕ್ಷಕ ವಿಷ್ಣು ಪಟಗಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನವರು ನೀಡಿದ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.