ಸಿದ್ದಾಪುರ: ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧೀಶ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನಿಂದ ಬೆಂಗಳೂರುವರೆಗೆ ನಡೆಯಲಿರುವ ಪಾದಯಾತ್ರೆ ಬುಧವಾರ ಜಿಲ್ಲೆ ಪ್ರವೇಶಿಸಿದೆ. ಗಡಿಯ ಭಾಗವಾದ ತಾಲೂಕಿನ ಮನ್ಮನೆಯಲ್ಲಿ ಸಂಜೆ ಪಾದಯಾತ್ರೆಯನ್ನು ಸ್ಥಳೀಯ ಸಮಿತಿ ಸ್ವಾಗತಿಸಿದೆ.
ತಾಲೂಕು ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಕೊಲಶಿರ್ಸಿ, ಗೌರವಾಧ್ಯಕ್ಷ ವೀರಭದ್ರ ನಾಯ್ಕ, ಪ್ರಮುಖರಾದ ವಸಂತ ನಾಯ್ಕ ಮನ್ಮನೆ, ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕೊಂಡ್ಲಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಾವಂಚೂರ, ಸಂಚಾಲಕ ರವಿಕುಮಾರ್ ಕೊಠಾರಿ, ಸಮಿತಿಯ ಗಾಂಧೀಜಿ ಸೇರಿದಂತೆ ಸಮಾಜದ ಪ್ರಮುಖರು ಪಾದಯಾತ್ರೆಯನ್ನು ಸ್ವಾಗತಿಸಿ ಅವರೊಂದಿಗೆ ಹೆಜ್ಜೆ ಹಾಕಿದರು.
ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಾಗೂ ಡೊಳ್ಳುಕುಣಿತ ಪಾದಯಾತ್ರೆಯ ಮೆರಗು ಹೆಚ್ಚಿಸಿತ್ತು. ನಂತರ ಮನ್ಮನೆಯಲ್ಲಿ ಜಾಗೃತಿ ಸಭೆ ನಡೆಸಲಾಯಿತು. ಜನವರಿ 19ರಂದು ಕಾವಂಚೂರು, ಅಕ್ಕುಂಜಿ, ಸಿದ್ದಾಪುರ ಪಟ್ಟಣ, ಕೊಂಡ್ಲಿ ಜಾತ್ರೆ ಮೈದಾನದಲ್ಲಿ ಜಾಗೃತಿ ಸಭೆ ನಡೆಯಲಿದೆ.