ಭಟ್ಕಳ: ಕಾರವಾರದಿಂದ ಬೆಂಗಳೂರಿಗೆ ಸಾಗುವ ರೈಲು ಸದಾ ಜನಜಂಗುಳಿಯಿಂದ ಕೂಡಿದ್ದು, ಟಿಕೆಟ್ ಸಿಗದೇ ಪ್ರಯಾಣಿಕರು ತಿಂಗುಳಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಕೊಂಕಣರೇಲ್ವೆ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಲು ಪ್ರತಿದಿನ ಹೊಸ ರೈಲು ಬಿಡಬೇಕೆಂದು ಆಗ್ರಹಿಸಿ ಕ್ರಿಯಾಶೀಲ ಗೆಳೆಯರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಕೊಂಕಣ ರೈಲ್ವೆ ಮುಖ್ಯ ವ್ಯವಸ್ಥಾಪಕರಿಗೆ ಭಟ್ಕಳ ಸ್ಟೇಷನ್ ಮಾಸ್ಟರ್ ಮೂಲಕ ಮನವಿ ರವಾನಿಸಿದರು.
ಭಟ್ಕಳದಿಂದ ನೂರಾರು ಪ್ರಯಾಣಿಕರು ಸರಕಾರಿ ಕೆಲಸಕ್ಕೆ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಂಗಳೂರಿಗೆ ಭಟ್ಕಳದಿಂದ ಒಂದೇ ಟ್ರೇನ್ ಇದ್ದು, ಇದು ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತದೆ. ಈ ರೈಲಿನಲ್ಲಿ ಪ್ರತಿದಿನ ಪ್ರಯಾಣಿಕರಿಗೆ ಸೀಟು ಸಿಗದೇ ತೊಂದರೆ ಪಡುತ್ತಿದ್ದಾರೆ. ಆದ್ದರಿಂದ ವಾರಕ್ಕೆ ಒಂದು ಸಲ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬರುವ ಟ್ರೇನ್ (ನಂ 06563/06564)ನ್ನು ಪ್ರತಿದಿನ ಹೊರಡುವ ಹಾಗೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇರಳದ ಕೊಚ್ಚುವೇಲಿಯಿಂದ ಹರಿದ್ವಾರಕ್ಕೆ ಹೋಗುವ ರೈಲು (ನಂ 22659 /22660) ಭಟ್ಕಳ ಅಥವಾ ಮುರುಡೇಶ್ವರದಲ್ಲಿ ನಿಲುಗಡೆಯಾಗಬೇಕು. ನೇತ್ರಾವತಿ ರೈಲು (16345-16346) ಈ ಹಿಂದೆ ಭಟ್ಕಳದಲ್ಲಿ ನಿಲುಗಡೆಯಾಗುತ್ತಿತ್ತು. ಕೊರೋನಾ ಸಂಧರ್ಭದಲ್ಲಿ ಈ ರೈಲಿನ ನಿಲುಗಡೆಯನ್ನು ರದ್ದು ಮಾಡಿದ್ದು, ಈ ರೈಲನ್ನು ಪುನಃ ಭಟ್ಕಳದಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. 16575/16576 ಬೆಂಗಳೂರು ಯಶವಂತಪುರದಿಂದ ಮಂಗಳೂರಿಗೆ ಬರುವ ಗೋಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಕಾರವಾರದವರೆಗೆ ವಿಸ್ತರಿಸಬೇಕು. ಕಾರವಾರದಿಂದ ಬೆಂಗಳೂರಿಗೆ ವಾರಕ್ಕೆ ಮೂರು ದಿನ ಹೋಗುವ ಮೆಮೋ ರೈಲನ್ನು ಪ್ರತಿದಿನ ಹೋಗುವಂತೆ ಕ್ರಮವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶ್ರೀಕಾಂತ ನಾಯ್ಕ, ಮನಮೋಹನ ನಾಯ್ಕ, ವಿಶ್ವಹಿಂದೂ ಪರಿಷತ್‌ನ ಶಂಕರ ಶೆಟ್ಟಿ, ಬಾಬು ಭಟ್ಕಳಕರ, ಸುರೇಶ ಆಚಾರಿ, ರಿಕ್ಷಾ ಯೂನಿಯನ್‌ನ ಗಣಪತಿ ನಾಯ್ಕ, ಆನಂದ ನಾಯ್ಕ, ದತ್ತು ಭಟ್ಕಳ ಮತ್ತಿತರರು ಇದ್ದರು.