ಸಿದ್ದಾಪುರ: ಸರಸ್ವತಿ ಹೆಗಡೆ ಸಶಿಗುಳಿ ಅವರಿಗೆ ಸ್ಥಳೀಯ ಸಮನ್ವಯ ಪ್ರಕಾಶನದಿಂದ ಸನ್ಮಾನ ಕಾರ್ಯಕ್ರಮವನ್ನು ಅವರ ಮನೆಯಂಗಳದಲ್ಲಿ ನಡೆಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವೈದಿಕ ವಿದ್ವಾಂಸ ಮಂಜುನಾಥ ಭಟ್ಟ ಕಲ್ಲಾಳ ವಹಿಸಿ ಮಾತನಾಡಿ, ಜೀವನೋತ್ಸಾಹವನ್ನು ಕಳೆದುಕೊಳ್ಳಬಾರದು. ಸತ್ಕಾರ್ಯ ಮಾಡುವುದರ ಮೂಲಕ ಸನ್ಮಾನಕ್ಕೆ ಯೋಗ್ಯರಾಗುತ್ತವೆ. ಮನೆಯನ್ನು ನಿಭಾಯಿಸಿಕೊಂಡು ಬರುವಲ್ಲಿ ಸ್ತ್ರೀಯರ ಪಾತ್ರ ಬಲುದೊಡ್ಡದು. ಸರಸ್ವತಿ ಹೆಗಡೆ ಸಶಿಗುಳಿರವರು ಅನೇಕ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡಿದ ಪುಣ್ಯ ಸಂಪಾದನೆ ಇರುವುದರಿಂದ ಸನ್ಮಾನಕ್ಕೆ ಯೋಗ್ಯರು ಎಂದು ಹೇಳಿದರು.
ಸಮನ್ವಯ ಪ್ರಕಾಶನದ ಅಧ್ಯಕ್ಷ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಅಭಿನಂದನೆ ಭಾಷಣದಲ್ಲಿ, ಸರಸ್ವತಿ ಹೆಗಡೆರವರು ಉತ್ತಮ ಸಾಂಪ್ರದಾಯಿಕ ಹಾಡುಗಾರರು. ಸಂದರ್ಭೋಚಿತವಾಗಿ ಹಾಡುಗಳನ್ನು ಹಾಡುವುದು ಹಾಗೂ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಕಲ್ಪಿಸಿರುವುದು ಬಲು ಮಹತ್ವದ ವಿಚಾರ. ಸ್ವಾತಂತ್ರ್ಯ ಯೋಧರ ಕುಟುಂಬದಲ್ಲಿ ಜನಿಸಿ, ಕೃಷಿಕರ ಬದುಕಿನ ಔನ್ನತ್ಯದಲ್ಲಿ ಸಹಭಾಗಿಯಾಗಿ ದುಡಿದು 90 ವರುಷಗಳನ್ನು ಕಂಡ ಹಿರಿಯ ಜೀವ ಎಂದು ಅಭಿನಂದಿಸಿ ಸನ್ಮಾನವನ್ನು ನೆರವೇರಿಸಿದರು.
ಸನ್ಮಾನಪತ್ರವನ್ನು ಸುಜಯ ಬಾಲಚಂದ್ರ ಹೆಗಡೆ ಬಾಳಗೋಡ ವಾಚನ ಮಾಡಿದರು. ಉದ್ಯಮಿ ಆರ್.ಎಂ. ಹೆಗಡೆ ಸಶಿಗುಳಿ ಸ್ವಾಗತಿಸಿದರು. ಜಿ.ಎಂ.ಹೆಗಡೆ ಸಶಿಗುಳಿ ವಂದಿಸಿದರು. ವೈದಿಕ ವಿದ್ವಾಂಸ ಮಂಜುನಾಥ ಭಟ್ಟ ಐನಕೈ, ಕಂದಾಯ ಇಲಾಖೆಯ ಕಿರಿಯ ನಿವೃತ್ತ ಅಧಿಕಾರಿ ಎಸ್.ಎನ್.ಹೆಗಡೆ ಮದ್ದಿನಕೇರಿ ಹಾಗೂ ಪ್ರಗತಿಪರ ಕೃಷಿಕ ಆರ್.ಎನ್. ಹೆಗಡೆ ಹುಸೇಗಾರ ಅವರು ಉಪಸ್ಥಿತರಿದ್ದರು.
ಸರಸ್ವತಿ ಹೆಗಡೆ ಸಶಿಗುಳಿಗೆ ಸನ್ಮಾನ
