Slide
Slide
Slide
previous arrow
next arrow

‘ವಿಕ್ರಮಾರ್ಜುನ ವಿಜಯ’ಕ್ಕೆ ಸಾವಿರ ವರ್ಷ: ಬನವಾಸಿಯಲ್ಲಿ ಸಂಭ್ರಮಾಚರಣೆಗೆ ನಿರ್ಧಾರ

300x250 AD

ಕುಮಟಾ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ಪಟ್ಟಣದ ವೈಭವ ಪ್ಯಾಲೇಸ್ ಸಭಾಭವನದಲ್ಲಿ ನಡೆಯಿತು.
‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮುಂದಿನ ದಿನಗಳಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ ಚಿಂತನಗೋಷ್ಠಿ ಹಮ್ಮಿಕೊಳ್ಳವುದರ ಜೊತೆಗೆ ಹಿರಿಯ ಸಾಹಿತಿಗಳ ಬದುಕು ಬರಹಗಳ ಬಗೆಗೂ ವಿಚಾರ ಸಂಕಿರಣ ಏರ್ಪಡಿಸುವುದು ಮಾತ್ರವಲ್ಲದೇ ಸಂಗೀತ, ಕಲೆ, ಕೃಷಿ, ಮೀನುಗಾರಿಕೆ, ಕುಲಕಸುಬು ಮುಂತಾದವುಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಮಾಲಿಕೆ ಆರಂಭಿಸಲು ನಿರ್ಣಯಿಸಿತು ಎಂದು ಪ್ರಧಾನ ಸಂಚಾಲಕ ಎನ್.ಜಯಚಂದ್ರನ್ ಮಾಹಿತಿ ನೀಡಿದ್ದಾರೆ.
ಆದಿಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ ಕೃತಿಗೆ ಒಂದು ಸಾವಿರ ವರ್ಷ ದಾಟಿದ ಹಿನ್ನೆಲೆಯಲ್ಲಿ ಬನವಾಸಿಯಲ್ಲೇ ಸಂಭ್ರಮಾಚರಣೆ ಹಮ್ಮಿಕೊಂಡು ನಾಡಿನ ಹಿರಿಯ ವಿದ್ವಾಸರು ಮತ್ತು ವಿದ್ಯಾರ್ಥಿವೃಂದದೊಟ್ಟಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗುವುದು. ಹನ್ನೆರಡನೆ ಶತಮಾನದ ವಚನ ಚಳುವಳಿಯ ಬಗೆಗೂ ‘ಹಣತೆ’ ವಿಶೇಷ ಗಮನಕೊಟ್ಟು ಪ್ರತಿ ತಾಲೂಕಿನಲ್ಲಿ ‘ವಚನ ವಾಚನ’ ಮಾಲಿಕೆ ಆರಂಭಿಸಲು ಚಿಂತಿಸಲಾಗಿದೆ.
ಜಿಲ್ಲೆಯ ಸಾಹಿತ್ಯಾಸಕ್ತರೊಂದಿಗೆ ಶಿವಮೊಗ್ಗದ ಕುಪ್ಪಳ್ಳಿಯ ‘ಕವಿಶೈಲ’ಕ್ಕೆ ತೆರಳಿ ಅಲ್ಲಿ ವಿದ್ವಾಂಸರಿಂದ ಕುವೆಂಪು ಬದುಕಿನ ಹೆಜ್ಜೆಗಳ ಕುರಿತಂತೆ ಕಮ್ಮಟ ಏರ್ಪಡಿಸುವುದು. ದಾಂಡೇಲಿಯಲ್ಲಿ ಕವಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯದ ಕುರಿತಂತೆ ವಿಚಾರಸಂಕಿರಣ ನಡೆಸುವುದರ ಜೊತೆಗೆ ಕಥಾಕಮ್ಮಟ, ಕಾವ್ಯಕಮ್ಮಟ ಹಮ್ಮಿಕೊಳ್ಳುವುದು. ಕನ್ನಡ ಉಪನ್ಯಾಸಕರಿಗೆ, ಅಧ್ಯಾಪಕರಿಗೆ ವಿಶೇಷವಾಗಿ ಕಮ್ಮಟ ಹಮ್ಮಿಕೊಂಡು ಹಿರಿಯ ಭಾಷಾ ತಜ್ಞರಿಂದ ಹಳಗನ್ನಡ, ನಡುಗನ್ನಡ ಸಾಹಿತ್ಯದ ಓದಿನ ಕುರಿತಂತೆ ಉಪನ್ಯಾಸ ಮಾಲಿಕೆ ಹಮ್ಮಿಕೊಂಡು ಅವರಿಗೆ ತರಗತಿಯಲ್ಲಿ ಸರಳವಾಗಿ ಪಂಪ, ರನ್ನ, ಪೊನ್ನ, ರಾಘವಾಂಕ ಮುಂತಾದವರ ಕಾವ್ಯಗಳ ಬಗ್ಗೆ ಪಾಠಮಾಡಲು ಅನುಕೂಲ ಆಗುವಂತೆ ಅವಕಾಶ ಕಲ್ಪಿಸುವತ್ತ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯ ಸುಶಿಕ್ಷಿತ ಯುವ ಸಮುದಾಯ ಬ್ಯಾಂಕಿಂಗ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ವಿಷಯ ತಜ್ಞರಿಂದ ತರಬೇತಿ ಶಿಬಿರ ಹಮ್ಮಿಕೊಳ್ಳುವುದು. ಆರ್ಥಿಕವಾಗಿ ಅಸಹಾಯಕ ಬರಹಗಾರರ ಅಪ್ರಕಟಿತ ಪಕ್ವ ಹಸ್ತಪ್ರತಿಗಳಿದ್ದರೆ, ಪ್ರಕಾಶಕರನ್ನು ಸಂಪರ್ಕಿಸಿ ಕೃತಿ ಪ್ರಕಟವಾಗುವಂತೆ ಪ್ರಯತ್ನಿಸುವುದು. ಜಿಲ್ಲೆಯ ಜನರಲ್ಲಿ ಭಾವೈಕ್ಯತೆ ರೂಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಹಾತ್ವಾಕಾಂಕ್ಷೆ ಹೊಂದಿರುವ ‘ಹಣತೆ’ ದೀಪಾವಳಿ ಮಾತ್ರವಲ್ಲದೇ, ರಮಜಾನ್, ಕ್ರಿಸ್‌ಮಸ್ ಹಬ್ಬಗಳ ಸಂದರ್ಭದಲ್ಲೂ ಸಾಮರಸ್ಯದ ಬೆಳಕು ಚೆಲ್ಲುವ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗುವುದು. ಅತಿಯಾದ ಇಂಗ್ಲಿಷ್ ವ್ಯಾಮೋಹದ ಸೋಂಕಿಗೆ ಒಳಗಾದ ಸಮಾಜದಲ್ಲಿ ಕನ್ನಡ ಅಂಕಿ ಮತ್ತು ಕನ್ನಡ ಸಹಿ ಬಳಕೆ ಮಾಡುವ ಆಂದೋಲನವನ್ನು ನಡೆಸುವುದರ ಜೊತೆಗೆ, ಕಾಲಕಾಲಕ್ಕೆ ಸಾರ್ವಜನಿಕರಿಂದ ಬರಬಹುದಾದ ಸಲಹೆ ಸೂಚನೆಗಳನ್ನು ಪರಿಶೀಲಿಸಿ, ಉತ್ತಮ ಸಂಗತಿಗಳನ್ನು ಸಮುದಾಯಕ್ಕೆ  ತಲುಪಿಸಲು ಕಾರ್ಯಕ್ರಮ ಸಂಯೋಜಿಸುವುದು.
ಜಾನಪದ ಸಾಹಿತ್ಯ ಸಂವಹನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಬುಡಕಟ್ಟು ಜನಾಂದ ಮಹಾಕಾವ್ಯಗಳ ಅರಿವು ಕಾರ್ಯಕ್ರಮ ಹಮ್ಮಿಕೊಂಡು ನಾಗರಿಕ ಸಮಾಜದಲ್ಲಿ ಅವುಗಳ ಪ್ರಸ್ತುತತೆಯ ಚಿಂತನಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾಹಿತ್ಯ, ಜಾನಪದ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಪಿ.ಹೆಚ್.ಡಿ ಮತ್ತು ಎಂ.ಫಿಲ್ ಪದವಿಯ ಉತ್ಕೃಷ್ಟ ಪ್ರಬಂಧಗಳ ಮರು ಓದು ಸರಣಿಯನ್ನು ಆರಂಭಿಸಲಾಗುವುದು.
‘ಮನೆ ಮನೆ ಜಗಲಿಗೆ ಹಣತೆ’ ಕಾರ್ಯಕ್ರಮವನ್ನು ಹಮ್ಮಿಕೊಂಡು ಮನೆ ಮನೆಯಲ್ಲೂ ಕನ್ನಡ ಪ್ರೀತಿ ಮತ್ತು ವೈಚಾರಿಕ ಚಿಂತನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ. ಹೀಗೆ ಇನ್ನೂ ಹತ್ತು ಹಲುವು ರೀತಿಯಲ್ಲಿ ಬೆಳಕು ಚೆಲ್ಲಲು ‘ಹಣತೆ’ ಕಾರ್ಯಕ್ರಮ ರೂಪಿಸಿ ತನ್ನ ಮಿತಿ ಮತ್ತು ಸಾಧ್ಯತೆಯಲ್ಲಿ ಪ್ರಯತ್ನಿಸಲು ಜಿಲ್ಲಾ ಕಾರ್ಯಕಾರಿ ನಿರ್ಧರಿಸಿದೆ ಎಂದು ಪ್ರಧಾನ ಸಂಚಾಲಕ ಎನ್.ಜಯಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಉದಯ ಮಡಿವಾಳ, ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಸದಸ್ಯರಾದ ಪ್ರೊ.ನಾಗರಾಜ ಹೆಗಡೆ ಅಪಗಾಲ, ಪ್ರೊ. ಉಪೇಂದ್ರ ಘೋರ್ಪಡೆ, ಡಾ. ಶ್ರೀಧರ ಉಪಿನಗಣಪತಿ, ದಾಮೋದರ ಜಿ. ನಾಯ್ಕ ಅಂಬಾರಕೊಡ್ಲು ತಾಲೂಕು ಅಧ್ಯಕ್ಷರಾದ ಪ್ರಕಾಶ ನಾಯ್ಕ ಕುಮಟಾ, ಪ್ರಶಾಂತ ಹೆಗಡೆ ಹೊನ್ನಾವರ, ರಾಘವೇಂದ್ರ ಹೊನ್ನಾವರ ಯಲ್ಲಾಪುರ, ವಿನಯ ನಾಗೇಶ ಪಾಲನಕರ ಮುಂಡಗೋಡ, ರಾಮಕೃಷ್ಣ ಜಿ. ಗುನಗ ಹಳಿಯಾಳ, ರಾಘವೇಂದ್ರ ಗಡೆಪ್ಪನವರ್ ದಾಂಡೇಲಿ, ಅಕ್ಷಯ ಶ್ರೀಪಾದ ನಾಯ್ಕ ಅಂಕೋಲಾ ಮೊದಲಾದವರು ಪಾಲ್ಗೊಂಡಿದ್ದರು ಎಂದು ಜಯಚಂದ್ರನ್ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top