ಕುಮಟಾ: ಹವಾಮಾನ ವೈಪರಿತ್ಯದಿಂದ ಕಳೆದೆರಡು ವರ್ಷಗಳಿಂದ ಕುಂಠಿತವಾಗಿದ್ದ ಗೇರು ಬೆಳೆ ಈ ವರ್ಷ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗೇರು ಮರಗಳಿಗೆ ರಾಶಿ ರಾಶಿ ಹೂ ಬಿಟ್ಟಿರುವುದು ಉತ್ತಮ ಬೆಳೆ ಬರುವ ನಿರೀಕ್ಷೆ ಮೂಡುವಂತಾಗಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳ ಪ್ರಮುಖ ತೋಟಗಾರಿಕೆ ಬೆಳೆಯಲ್ಲಿ ಗೇರು ಕೂಡ ಗುರುತಿಸಿಕೊಂಡಿದೆ. ಖಾಲಿಯಿರುವ ಬೆಟ್ಟಗುಡ್ಡಗಳು ಮತ್ತು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶ ಗೇರು ಮರಗಳಿಂದ ಆವರಿಸಿಕೊಂಡಿದೆ. ದಟ್ಟವಾದ ಬಿಸಿಲಿರಲಿ ಅಥವಾ ನೀರಿನ ಪೂರೈಕೆ ಇಲ್ಲದಿದ್ದರೂ ದಟ್ಟವಾಗಿ ಬೆಳೆಯುವ ಗೇರು ಮರಗಳು ರೈತರ ಪಾಲಿನ ಆರ್ಥಿಕ ಮೂಲ ಹೆಚ್ಚಿಸುವಂತಹ ಬೆಳೆಯಾಗಿದೆ. ಗೇರು ಸೀಜನ್‌ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ, ಸಾಕಷ್ಟು ಆದಾಯ ಮಾಡಿಕೊಳ್ಳುವ ರೈತರ ಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಜಾಸ್ತಿಯೇ ಇದೆ. ಅದರಲ್ಲೂ ಈ ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿ ವಿಶೇಷ ರುಚಿಯನ್ನು ಹೊಂದಿದ್ದು, ಜಗತ್ತಿನಾದ್ಯಂತ ಸಾಕಷ್ಟು ಬೇಡಿಕೆ ಇದೆ.
ಆದರೆ ಹವಾಮಾನ ವೈಪರಿತ್ಯದಿಂದ ಕಳೆದೆರಡು ವರ್ಷಗಳಿಂದ ಗೇರು ಬೆಳೆಗೆ ಸಾಕಷ್ಟು ಹೊಡೆತ ಬಿದ್ದಿತ್ತು. ಕಳೆದ ವರ್ಷ ಹೂ ಬಿಡುವ ಸಮಯದಲ್ಲಿ ಮಳೆ ಸುರಿದು ಗೇರು ಬೆಳೆ ನೆಲಕಚ್ಚುವಂತಾಗಿತ್ತು. ಆದರೆ ಈ ವರ್ಷ ಸಮಯಕ್ಕೆ ಸರಿಯಾಗಿ ಹೂ ಬಿಟ್ಟಿದ್ದು, ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಫಸಲಿಗೆ ಸಜ್ಜಾಗಲಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡುವರೆ ಸಾವಿರ ಹೆಕ್ಟೇರ್ ಮತ್ತು ಕುಮಟಾ ತಾಲೂಕಿನಲ್ಲಿ 500 ಹೆಕ್ಟರ್ ಪ್ರದೇಶಗಳಲ್ಲಿ ರೈತರು ಗೇರು ಬೆಳೆ ಬೆಳೆದಿದ್ದು, ಇದೇ ವಾತಾವರಣವಿದ್ದರೆ ಉತ್ತಮ ಬೆಳೆಯ ನೀರಿಕ್ಷೆಯ ಆಶಾ ಭಾವ ರೈತರಲ್ಲಿ ಮೂಡುವಂತಾಗಿದೆ.
ಗೋವಾದಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ಬಂದ ಗೇರು ಬೆಳೆ ರೈತರನ್ನು ಕೈಹಿಡಿದು ಆರ್ಥಿಕ ಚೇತರಿಕೆ ಕಂಡುಕೊಳ್ಳಲು ಸಹಾಯಕಾರಿಯಾಗಿತ್ತು. ಹಾಗಾಗಿ ಗೋಡಂಬಿಗೆ ಗೋವೆ ಬೀಜ ಎಂದು ಸಹ ಕರೆಯುತ್ತಾರೆ. ಗೇರು ಹಣ್ಣು ಮದ್ಯ ತರಾರಿಕೆಗೆ ಬಳಕೆಯಾಗುತ್ತಿತ್ತು. ಹವಾಮಾನ ವೈಪರಿತ್ಯ ರೋಗಬಾಧೆಯಿಂದ ಗೇರು ಕೃಷಿ ಅವಸಾನದತ್ತ ಸಾಗುತ್ತಿದೆ. ಈ ಹಿಂದೆ ಕುಮಟಾದಲ್ಲಿ ಅತಿ ಹೆಚ್ಚು ಗೇರು ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯಾಗಿದ್ದರಿಂದ ಇಲ್ಲಿನ ಗೇರುಬೀಜ ಪೂರೈಕೆ ಕಡಿಮೆಯಾಗಿ, ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ್ದರಿಂದ ದರದಲ್ಲಿ ಕುಸಿತ ಕಂಡು ಗೇರು ಕೃಷಿಯಿಂದ ರೈತರು ವಿಮುಖರಾಗಲು ಮುಖ್ಯ ಕಾರಣವಾಗಿದೆ. ಫಸಲಿಗೆ ಮುನ್ನವೇ ಸರ್ಕಾರ ಬೆಲೆ ನಿಗದಿಪಡಿಸಿ, ನೂತನ ಯೋಜನೆಗಳನ್ನು ಅನುಷ್ಠಾನಗಳಿಸಿದರೆ ಈಗ ಉಳಿದ ಗೇರು ಕೃಷಿಕರನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂಬುದು ಬಹುತೇಕ ಗೇರು ಕೃಷಿಕರ ಅಭಿಮತವಾಗಿದೆ.
ತಾಲೂಕಿನಲ್ಲಿ ವೆಂಗುರ್ಲಾ-4-7 ಮತ್ತು ಉಳ್ಳಾಳ ತಳಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ವೆಂಗುರ್ಲಾ ತಳಿಯು ಒಂದು ಮರಕ್ಕೆ ಗರಿಷ್ಠ 20 ಕೆ.ಜಿ ವರೆಗೆ ಗೇರು ಬೀಜ ಸಿಗುತ್ತದೆ. ಉಳ್ಳಾಳ ಸ್ಥಳೀಯ ತಳಿಯಾಗಿದ್ದು, ಇದು ಒಂದು ಮರಕ್ಕೆ ಗರಿಷ್ಠ 10 ಕೆ.ಜಿ ಗೇರು ಬೀಜ ಲಭಿಸುತ್ತದೆ. ತೋಟಗಾರಿಕಾ ಇಲಾಖೆಯ ಪ್ರಕಾರ 1 ಎಕರೆಗೆ 80 ಮರ ಇರಬೇಕು. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಮರ ಅಗಲವಾಗಿ ಹರಡಿಕೊಂಡಿರುವುದರಿಂದ 40 ಮರಗಳು ಮಾತ್ರ ಇದೆ. ಇದರಿಂದ ಇಳುವರಿಯೂ ಸಹ ಕುಂಠಿತವಾಗುತ್ತದೆ. ರೈತರು ಸರಿಯಾಗಿ ನಿರ್ವಹಣೆ ಮಾಡಿದರೆ 1 ಎಕರೆಗೆ ಸುಮಾರು 5 ಕ್ವಿಂಟಾಲ್‌ವರೆಗೆ ಪಡೆಯಬಹುದು ಇದೇ ವಾತಾವರಣ ಮುಂದುವರೆದರೆ ರೈತರಿಗೆ ಉತ್ತಮ ಆದಾಯ ಲಭಿಸುತ್ತದೆ. ಇನ್ನು ಟಿ-ಸೊಳ್ಳೆಯು ಹೂವಿನ ರಸ ಹೀರುವುದರಿಂದ ಹೂವು ಕಪ್ಪಾಗಿ ಉದುರುತ್ತದೆ. ಕಾಂಡಕೊರೆತ ಹುಳವು ಮರದ ಕಾಂಡವನ್ನು ತಿನ್ನುವುದರಿಂದ ಮರಗಳು ಸಾಯುತ್ತವೆ. ಆ ಮರವನ್ನು ತೆಗೆದು ಮತ್ತೊಂದು ಗಿಡ ಹಾಕುವುದಿಲ್ಲ. ಇದರಿಂದ ಬೆಳೆ ಕಡಿಮೆಯಾಗುತ್ತದೆ. ಡೈಮತೋಯಿಟ್ ದ್ರಾವಣವನ್ನು ಒಂದು ಲೀಟರ್ ನೀರಿಗೆ 1.7 ಎಮ್‌ಎಲ್ ಬೆರೆಸಿ ಸಿಂಪಡಣೆ ಮಾಡುವುದರಿಂದ ರೋಗ ತಡೆಗಟ್ಟಲು ಸಾಧ್ಯವಿದೆ ಎನ್ನುವುದು ತೋಟಗಾರಿಕೆ ಅಧಿಕಾರಿಗಳ ಮಾತಾಗಿದೆ.
ರಾಶಿ ರಾಶಿ ಹೂ ಬಿಟ್ಟ ಗೇರು; ಉತ್ತಮ ಇಳುವರಿಯ ನಿರೀಕ್ಷೆ
