ಹೊನ್ನಾವರ: ಪಟ್ಟಣದ ಎಸ್‌ಡಿಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಪಟ್ಟಣ ಪಂಚಾಯತಿ ಸದಸ್ಯರಾದ ಶಿವರಾಜ ಮೇಸ್ತ ಚಾಲನೆ ನೀಡಿದರು. ನಂತರ ಮಾತನಾಡಿ ದುಶ್ಚಟಕ್ಕೆ ದಾಸರಾಗಬೇಡಿ. ಈಗಾಗಲೇ ದುಶ್ಚಟಕ್ಕೆ ಒಳಗಾದವರ ಮಾಹಿತಿ ಇದ್ದರೆ ನೀಡಿ ಅವರನ್ನು ಸರಿಪಡಿಸಲು ಪ್ರಯತ್ನಿಸೋಣ ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಿಸೋಣ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಎಂ.ಎಚ್.ಭಟ್ ಮಾತನಾಡಿ, ಮಕ್ಕಳಾದ ನೀವು ಸಮಾಜದ ಪ್ರಭಾರಿಗಳಾಗಿದ್ದೀರಿ. ಸಮಾಜದ ಸ್ವಾಸ್ಥ್ಯ ನಿರ್ಮಿಸಲು ಸದಾ ಜಾಗೃತರಾಗಬೇಕು ಎಂದರು. ಯೋಜನೆಯ ಮೇಲ್ವಿಚಾರಕ ನಾಗರಾಜ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಜನಜಾಗೃತಿ ಕಾರ್ಯಕ್ರಮದ ಉದ್ದೇಶ,ಕೈಗೊಂಡ ಸಮಾಜಮುಖಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ರೂಪಾ ಮೇಸ್ತ, ಸೇವಾಪ್ರತಿನಿಧಿ ಚಂದ್ರಾವತಿ ಉಪಸ್ಥಿತರಿದ್ದರು. ಉಪನ್ಯಾಸಕರ ವಿನಾಯಕ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.