ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾರಣ ಪ್ರೇಮಿಗಳ ಮತ್ತು ಭಕ್ತಾದಿಗಳ ಶೃದ್ಧಾ ಕೇಂದ್ರವಾದ ಶಿರ್ವೆ ಗುಡ್ಡದ ಶ್ರೀ ಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವು ಅದ್ದೂರಿಯಾಗಿ ನಡೆಯಿತು.
ಜಾತ್ರೆಯ ಸಮಯದಲ್ಲಿ ತಾಲೂಕಿನ ಅಮದಳ್ಳಿ ಗ್ರಾಮದ ವೀರಶೈವದವರು ಆಗಮಿಸಿದ ನಂತರ ಶ್ರೀ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊoಡಿತು. ಉಳವಿ ಕ್ಷೇತ್ರದ ನಂತರ ಶ್ರೀ ಶರಣರು ಸಂಬಂಧ ಹೊಂದಿದ ಎರಡನೆಯ ಪುಣ್ಯಸ್ಥಳ ಇದಾಗಿದೆ. ಭಕ್ತರು, ಕುಳಾವಿಗಳು ಸಂಜೆಯ ಸಮಯದಲ್ಲಿ ಪಲ್ಲಕ್ಕಿಯನ್ನು ಗುಡ್ಡದ ಮೇಲೆ ತೆಗೆದುಕೊಂಡು ನಿರ್ದಿಷ್ಟ ಸ್ಥಳದಲ್ಲಿಟ್ಟು ಬೆಳಿಗ್ಗೆ ಶಿರ್ವೆ ಗುಡ್ಡದ ಶಿಖರದಲ್ಲಿರುವ ನಂದಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳು ಸಹ ಈ ಶಿಖರಕ್ಕೆ ತೆರಳಿ ದೇವರಿಗೆ ಪ್ರಾರ್ಥಿಸಿದರು.
ಸಾವಿರಾರು ಭಕ್ತಾದಿಗಳಿಗೆ ಶಿರ್ವೆ ಗುಡ್ಡ ದೈವೀಶಕ್ತಿಯಾದರೆ, ಚಾರಣ ಪ್ರಿಯರಿಗೆ ಗುಡ್ಡ ಏರುವುದೇ ಒಂದು ರೋಮಾಂಚನ. ಅದೇ ರೀತಿ ಈ ಪ್ರದೇಶವು ವನ್ಯಮೃಗಗಳ ತಾಣವು ಕೂಡಾ ಹೌದು. ಪೌರಾಣಿಕ ಇತಿಹಾಸ ಹೊಂದಿರುವ ಶಿರ್ವೆ ಗುಡ್ಡ ಜಾತ್ರಾ ಮಹೋತ್ಸವದ ಶ್ರೀಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಪುಣ್ಯಸ್ಥಳದಲ್ಲಿ ಜಿಲ್ಲೆಯ ಹಾಗೂ ನೆರೆಹೊರೆಯ ರಾಜ್ಯಗಳ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀದೇವರ ದರ್ಶನವನ್ನು ಪಡೆದರು.
ರಾತ್ರಿ ಶ್ರೀದೇವರ ಮಹಾಪೂಜೆಯ ನಂತರ ತಾಲೂಕಿನ ಕೋವೆ ಗ್ರಾಮಸ್ಥರಿಂದ ‘ಮಧುರ ಮಹೇಂದ್ರ’ ಎಂಬ ಪೌರಾಣಿಕ ಯಕ್ಷಗಾನ ಅದ್ಧೂರಿಯಾಗಿ ಪ್ರದರ್ಶನಗೊಳ್ಳುವುದರ ಮೂಲಕ ಯಕ್ಷ ಪ್ರೇಮಿಗಳ ಮನ ಗೆದ್ದಿತ್ತು. ಈ ಶಿರ್ವೆ ಗುಡ್ಡದಲ್ಲಿ ಜಾತ್ರೆಯ ಸಮಯದಲ್ಲಿ ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಶಿರ್ವೆಯಲ್ಲಿ ಅದ್ಧೂರಿ ಸಿದ್ದರಾಮೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ
