ದಾಂಡೇಲಿ: ಕೆಪಿಸಿ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಹೊಸ ಕೆಪಿಸಿ ಕಾಲೋನಿಯಲ್ಲಿ ಸಂಘದ ಸದಸ್ಯರಿಗೆ ಮತ್ತು ಸದಸ್ಯರ ಕುಟುಂಬಸ್ಥರಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಹುಟ್ಟು, ಬದುಕು, ಸಾವು ನಿಶ್ಚಿತವಾದರೂ, ಈ ಮೂರು ದಿನದ ಜೀವನ ಯಾತ್ರೆಯಲ್ಲಿ ಸಮಾಜದ ಅಭಿವೃದ್ಧಿಗೆ ನಮ್ಮ ಪಾತ್ರ ಬಹಳ ಮುಖ್ಯವಾಗಿರುತ್ತದೆ. ನಮ್ಮ ಬದುಕಿನ ಜೊತೆಗೆ ಸಮಾಜದ ಸದೃಢತೆಗಾಗಿ, ಸದೃಢ ಸಮಾಜ ನಿರ್ಮಾಣಕ್ಕಾಗಿ ನಮ್ಮನ್ನು ನಾವು ಪರಿಪೂರ್ಣ ಮನಸ್ಸಿನಿಂದ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ನಮ್ಮೊಳಗೆ ಆತ್ಮೀಯ ಬಾಂದವ್ಯದ ಜೊತೆಗೆ ಪರಸ್ಪರ ಸೌಹಾರ್ದತೆಯ ಬಲವರ್ಧನೆಗಾಗಿ ಹಾಗೂ ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳಲ್ಲಿ ಸಾಂಘಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಹಾಗೂ ನಗರದ ಹಿರಿಯ ಸಮಾಜ ಸೇವಕರಾದ ಬಸಪ್ಪ ಕವಲಗಿಯವರು ಮಾತನಾಡಿ ನಾವೆಲ್ಲರ ವೃತ್ತಿ ಬದುಕಿನಲ್ಲಿ ಜೊತೆಯಾಗಿದ್ದವರು. ವೃತ್ತಿಯಲ್ಲಿ ನಿವೃತ್ತಿಯಾದನಂತರವೂ ಈ ಸಂಘಟನೆಯ ಮೂಲಕ ಜೊತೆಯಾಗಿ ಮುನ್ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ನಮ್ಮಲ್ಲಿ ಬೇಧಭಾವವಿಲ್ಲದೇ, ಸರ್ವ ಸಮನ್ವಯತೆಯಿಂದ ನಾವೆಲ್ಲರೂ ಇದ್ದು ಸಾಮಾಜಿಕವಾದ ಕಾಳಜಿಯನ್ನಿಟ್ಟುಕೊಂಡು ಸಂಘವನ್ನು ಮುನ್ನಡೆಸುತ್ತಿರುವುದು ಸಂಘದ ಅಭ್ಯುದಯಕ್ಕೆ ಪ್ರಮುಖ ಕಾರಣವಾಗಿದೆ. ಸಮಾಜದಿಂದ ಎಲ್ಲವನ್ನು ಪಡೆದ ನಾವು ಸಮಾಜಕ್ಕಾಗಿಯೂ ನಮ್ಮ ಸಂಘದ ಮೂಲಕ ಸತ್ಕಾರ್ಯಗಳನ್ನು ಮಾಡುವ ಆಶಯವೆ ನಮ್ಮ ಸಂಘದ್ದಾಗಿದ್ದು, ಅದರಂತೆ ಸಂಘದ ಸರ್ವ ಸದಸ್ಯರು ನಡೆದುಕೊಂಡು ಬರುತ್ತಿರುವುದು ಸಂಘದ ಐಕ್ಯತೆ ಮತ್ತು ಸಂಘ ಶಕ್ತಿಗೆ ಬಹುಮೂಲ್ಯ ಕಾರಣವಾಗಿದೆ ಎಂದರು.
ಮoಜುಳಾ ನಾಯ್ಕ ಅವರ ಪ್ರಾರ್ಥನೆಯ ಮೂಲಕ ಆರಂಭಗೊoಡ ಕಾರ್ಯಕ್ರಮಕ್ಕೆ ಎಸ್.ಸುಧೀಂದ್ರ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಈ ಸಂದರ್ಭದಲ್ಲಿ ಕೆಪಿಸಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಹತ್ತು ವರ್ಷಗಳನ್ನು ಪೊರೈಸಿದ 30 ಕೆಪಿಸಿ ನಿವೃತ್ತ ನೌಕರರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಪ್ರಮುಖರುಗಳಾದ ಜಿ.ವಿ.ಭಟ್, ಎಸ್.ಸುಧೀಂದ್ರ, ವಿ.ಎಂ.ಸುoಟನಕರ್ ಮೊದಲಾದವರು ಇದ್ದರು.