ಕಾರವಾರ: ಶಾಲಾ ಮಕ್ಕಳಿಗೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೆಡಿಕಲ್, ವೈನ್ ಶಾಪ್‌ನಲ್ಲಿ ವಯಸ್ಕರ ವಸ್ತುಗಳನ್ನ ಮಾರಾಟ ಮಾಡಬಾರದು. ವೈನ್ಸ್, ಬಾರ್, ಪಬ್‌ಗಳಿಗೆ ಚಿಕ್ಕ ಮಕ್ಕಳನ್ನ ಒಳ ಸೇರಿಸಿದಂತೆ ಹಾಗೂ ಅವರಿಂದ ಯಾವುದೇ ಮಾದಕ ವಸ್ತುಗಳನ್ನ ಮಾರಾಟ ಮಾಡಿಸದಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರಿಂದ ವೈನ್ ಸ್ಟೋರ್ ಹಾಗೂ ಮೆಡಿಕಲ್ ಶಾಪ್‌ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಬೆಂಗಳೂರಿನಲ್ಲಿ ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ವಯಸ್ಕರು ಬಳಸುವ ವಸ್ತುಗಳು ಪತ್ತೆಯಾಗಿದ್ದವು. ಈ ಘಟನೆಯ ಬಳಿಕ ಸಮಾಜ, ಮಕ್ಕಳನ್ನು ನಿಯಂತ್ರಿಸುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಇದು ಸಮಾಜವೇ ತಲೆತಗ್ಗಿಸುವ ವಿಚಾರ. ಆದರೆ ಅಪ್ರಾಪ್ತ ಮಕ್ಕಳಿಗೆ ಇಂಥ ಅನಗತ್ಯ ವಸ್ತುಗಳನ್ನ ನೀಡಬಾರದು ಎಂಬುದು ಕಾನೂನಿನಲ್ಲೇ ಇದೆ ಎಂದ ಅವರು, ಮದ್ಯ ಖರೀದಿ ವಯಸ್ಸು ಇಳಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಹಾಗೇನಾದರೂ ಅಂಥ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಿದರೆ ಮಳಿಗೆಯ ಪರವಾನಗಿ ರದ್ದುಪಡಿಸಬೇಕು. ವ್ಯಾಪಾರವಷ್ಟೇ ಅಲ್ಲ, ಮಕ್ಕಳ ರಕ್ಷಣೆ ಕೂಡ ಇಲ್ಲಿ ಮುಖ್ಯ. ಜನರನ್ನ ಸಾಯಿಸಿ ವ್ಯಾಪಾರ ಮಾಡುವುದು ಹೇಗೆ? ಎಂದರು.
ಉತ್ತರ ಕನ್ನಡದಲ್ಲಿ ಬುಡಕಟ್ಟು ಸಮುದಾಯಗಳಿರುವುದರಿಂದ ಇಲ್ಲಿ ಬಾಲ್ಯ ವಿವಾಹ ಪ್ರಕರಣಗಳಿವೆ. ಆದರೆ ಇದು ಚೈಲ್ಡ್ ಮ್ಯಾರೇಜ್ ಅಲ್ಲ, ಜೈಲ್ ಮ್ಯಾರೇಜ್. ಮಕ್ಕಳಲ್ಲಿ ಜಾಗೃತಿ ಇಲ್ಲದಿರುವುದರಿಂದ ಇಂಥ ಘಟನೆಗಳಾಗುತ್ತಿದ್ದು, ಹಳ್ಳಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದೆ. ಯಾರಿಗಾದರೂ ಜೈಲಿಗೆ ಹಾಕಿಸಬೇಕೆಂದರೆ 18 ವರ್ಷದೊಳಗಿನವರಿಗೆ ಮದುವೆ ಮಾಡಿಸಬೇಕು. ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲು ಗ್ರಾಮ ಮಟ್ಟದ ಮಕ್ಕಳ ಸಂರಕ್ಷಣಾ ಸಮಿತಿ, ಗ್ರಾಮ ಪಂಚಾಯತಿ ಮಟ್ಟದ ಸಮಿತಿ ಬಲಗೊಳಿಸಲು ತೀರ್ಮಾನಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಸ್ವಸಹಾಯ ಸಂಘದವರ ಸಹಯೋಗದಲ್ಲಿ ಈ ಸಮಿತಿ ರಚಿಸಲಾಗುತ್ತಿದೆ. ಇದನ್ನು ಮೇಲುಸ್ತಾವರಿ ಮಾಡಲು ಗ್ರಾಮ ಪಂಚಾಯತಿ ಪಿಡಿಒ, ಕಾರ್ಯದರ್ಶಿ, ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಇರಲಿದೆ ಎಂದರು.
ರಾಜ್ಯದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 195 ಸುಮೊಟೋ ಪ್ರಕರಣ ದಾಖಲಾಗಿದೆ. ಸರಾಸರಿ ಪ್ರತಿ ಜಿಲ್ಲೆಯಲ್ಲಿ 50ರಿಂದ 100 ಪ್ರಕರಣಗಳಿವೆ. ಆದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ, ಉತ್ತರ ಕನ್ನಡದಲ್ಲಿ ಕಡಿಮೆ ಇದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ ಹಾಗೂ ಬುಡಕಟ್ಟು ಜನಾಂಗಗಳಿರುವಲ್ಲಿ ಹೆಚ್ಚಿವೆ. ಜಿಲ್ಲೆಯಲ್ಲಿ ಇಂಥ 26 ಮದುವೆಗಳನ್ನು ತಡೆಯಲಾಗಿದ್ದು, ಹಳಿಯಾಳದಲ್ಲಿ ಹೆಚ್ಚು (19) ಮದುವೆಗಳನ್ನು ತಡೆಯಲಾಗಿದೆ. ಜಿಲ್ಲೆಯಲ್ಲಿ ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳು 45 ದಾಖಲಾಗಿವೆ. 26 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಈವರೆಗೆ ನನಗೆ ಸಿಕ್ಕ ಮಾಹಿತಿಯಂತೆ ರಾಜ್ಯದಲ್ಲಿ 2400ಕ್ಕೂ ಹೆಚ್ಚು ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದ್ದು, ನಿರಂತರವಾಗಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದರು.
ಮಕ್ಕಳ ಸಹಾಯವಾಣಿ 1098 ಈವರೆಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ರಾಷ್ಟç ಮಟ್ಟದಲ್ಲಿ ನಿಯಮಾವಳಿ ರಚನೆಯಾಗುತ್ತಿದ್ದು, 112 ಜೊತೆಗೆ ಈ ಸಹಾಯವಾಣಿಯನ್ನು ಸಂಯೋಜಿಸಲು ಚರ್ಚೆ ನಡೆದಿದೆ. ಅದಕ್ಕೆ ಹಿರಿಯ ನಾಗರಿಕರು, ಸಮಾಜ ಸೇವಕರನ್ನ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ ನಂತರ ಇದು ಚಾಲ್ತಿಗೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.