ಕಾರವಾರ: ನಗರದ ಹೊರವಲಯದ ಬಿಣಗಾದಲ್ಲಿ ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಕಡವೆ ಮೃತಪಟ್ಟಿದೆ.
ಇದು ಗಂಡು ಕಡವೆಯಾಗಿದ್ದು, ಸುಮಾರು ಮೂರು ವರ್ಷದ ಪ್ರಾಯದ್ದಾಗಿತ್ತು. ಗುಡ್ಡದ ಮೇಲಿನಿಂದ ಬಿಣಗಾ ಗ್ರಾಸಿಮ್ ಇಂಡಸ್ಟ್ರಿಸ್‌ನ ಆವಾರದ ಕಾಲುವೆಯಲ್ಲಿ ಬಿದ್ದು ಬಲ ಭಾಗದ ಹಿಂಗಾಲು ಮುರಿತಕ್ಕೊಳಗಾಗಿ ಭಯಭೀತಗೊಂಡಿತ್ತು. ಈ ಬಗ್ಗೆ ಗ್ರಾಸಿಮ್‌ನ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಬಳಿಕ ಅರಣ್ಯ ಅಧಿಕಾರಿಗಳು ಪಶು ವೈದ್ಯರಿಂದ ಕಡವೆಗೆ ಚಿಕಿತ್ಸೆ ನೀಡಿದ್ದರು. ಆದರೆ ಭಯಭೀತಗೊಂಡಿದ್ದ ಕಡವೆ ಚಿಕಿತ್ಸೆಯ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದೆ. ವನ್ಯಪ್ರಾಣಿಗಳ ಕಳೇಬರವನ್ನ ಹೂಳುವುದು ಅಥವಾ ದಹಿಸುವುದನ್ನ ಅರಣ್ಯ ಇಲಾಖೆ ನಿಷೇಧಿಸಿದ್ದು, ಬೇರೆ ಪ್ರಾಣಿಗಳಿಗೆ ಆಹಾರವಾಗಿ ಬಿಡುವಂತೆ ಆದೇಶಿಸಿದೆ. ಕಡವೆಯ ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಆಹಾರಕ್ಕಾಗಿ ಹಾಗೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.