ಕಾರವಾರ: ನಗರದ ಲೇಡಿಸ್ ಬೀಚ್ ಸಮೀಪದ ಗುಡ್ಡ ಅಗೆಯುತ್ತಿರುವುದನ್ನು ವಿರೋಧಿಸಿ ಬೈತಖೋಲ್- ಅಲಿಗದ್ದಾ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೈತಖೋಲ್ ಹಾಗೂ ಅಲಿಗದ್ದಾ ಭಾಗದ 300ಕ್ಕೂ ಹೆಚ್ಚು ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡು ಸೀಬರ್ಡ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬೈತಖೋಲ್ ಗುಡ್ಡದಲ್ಲಿ ಸೀಬರ್ಡ್ ಅಧಿಕಾರಿಗಳು ಗುಡ್ಡ ಕೊರೆದು ರಸ್ತೆ ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳ ಸಭೆ ಕರೆದು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಈಗಾಗಲೇ ಬೈತಖೋಲ್ ಗುಡ್ಡದ ಕಾಮಗಾರಿ ವೇಳೆ ಬಂಡೆಗಳು ಉರುಳುತ್ತಿದ್ದು, ಮಳೆಗಾಲದಲ್ಲಿ ಭೂಕುಸಿತ ಉಂಟಾದರೆ ಸಾವಿರಾರು ಮೀನುಗಾರರು ಜೀವ ಕೆಳೆದುಕೊಳ್ಳಬೇಕಾಗುತ್ತದೆ. ಜನಸಾಮಾನ್ಯರು ಮರ ಕಡಿಯುವ ವೇಳೆ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯಬೇಕಾಗುತ್ತದೆ. ಆದರೆ ಯಾವುದೇ ಪರವಾನಿಗೆ ಇಲ್ಲದೆ ಗುಡ್ಡದಲ್ಲಿ 2 ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ. ಹೀಗಾಗಿ ಮಣ್ಣು ಸಡಿಲವಾಗಿದ್ದು, ಮಳೆಗಾರದಲ್ಲಿ ಭೂಕುಸಿತ ಉಂಟಾಗುವುದು ಖಚಿತವಾಗಿದೆ. ಆದ್ದರಿಂದ ಅವಜ್ಞಾನಿಕ ರಸ್ತೆ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಮನವಿ ಮೂಲಕ ಆಗ್ರಹಿಸಿದರು.
ಜಿಲ್ಲಾಧಿಕಾರಿ ಸಭೆಯಲ್ಲಿದ್ದರಿಂದ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಮನವಿ ಸ್ವೀಕರಿಸಲು ಆಗಮಿಸಿದ್ದರು. ಆದರೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯೇ ಬರಬೇಕು ಎಂದು ಪಟ್ಟು ಹಿಡಿದರು. ಉಪವಿಭಾಗಾಧಿಕಾರಿ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪದ ಮಿನುಗಾರರು, ಜಿಲ್ಲಾಧಿಕಾರಿ ಬರುವವರೆಗೆ ಕಾಯುತ್ತೇವೆ ಎಂದು ಕಚೇರಿಯ ಎದುರೇ ಕುಳಿತು, ಸಭೆ ಮುಗಿಸಿ ಬಂದ ಡಿಸಿಗೆ ಮನವಿ ಸಲ್ಲಿಸಿದರು.