• Slide
  Slide
  Slide
  Slide
  previous arrow
  next arrow
 • ವಿದ್ಯುತ್ ತಂತಿ ಸ್ಪರ್ಶಿಸಿ ವನ್ಯಜೀವಿ ಮೃತಪಟ್ಟರೆ ಕಳ್ಳಬೇಟೆ ಅಲ್ಲ: ಹೈಕೋರ್ಟ್

  300x250 AD

  ಬೆಂಗಳೂರು: ರೈತ ತನ್ನ ಬೆಳೆ ರಕ್ಷಣೆಗಾಗಿ ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಮೃತಪಟ್ಟಿರುವ ಪ್ರಕರಣದಲ್ಲಿ ಪ್ರಾಣಿಗಳ ಬೇಟೆಯಾಡಿದ ಆರೋಪ ಹೊರಿಸಿ ಶಿಕ್ಷೆ ವಿಧಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
  ಕಳ್ಳೆಬೇಟೆ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ಆರು ತಿಂಗಳ ಕಾಲ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದು, ಆರೋಪಿಯ ದುಷ್ಕೃತ್ಯದಿಂದ ಪ್ರಾಣಿಯೊಂದು ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಮತ್ತು ವಿದ್ಯುತ್ ಕಾಯಿದೆಗಳ ಅಡಿ ವಿಧಿಸಿರುವ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆಯ ದೊಡ್ಡಬರಗಿ ಗ್ರಾಮದ ವೆಂಕಟೇಶ್ ಎಂಬುವರಿಗೆ ಮೈಸೂರಿನ ಸೆಷನ್ಸ್ ನ್ಯಾಯಾಲಯ ಆರು ತಿಂಗಳ ಕಾಲ ಶಿಕ್ಷೆ ಮತ್ತು 5 ಸಾವಿರ ರೂ.ಗಳ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
  ಪ್ರಕರಣದ ಹಿನ್ನೆಲೆ: ಅರಣ್ಯ ಇಲಾಖೆ ಸಿಬ್ಬಂದಿ 2008ರ ಜನವರಿ 1ರಂದು ಹೆಚ್.ಡಿ. ಕೋಟೆಯ ದೊಡ್ಡಬರಗಿ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕಾಡಂಚಿನ ಭಾಗದಲ್ಲಿ ಹದ್ದುಗಳು ಹಾರಾಡುತ್ತಿದನ್ನು ಗಮನಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವೆಂಕಟೇಶ್ ಎಂಬುವರಿಗೆ ಸೇರಿದ್ದ ಕಬ್ಬಿನ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಆನೆ ಮೃತಪಟ್ಟಿರುವುದು ಗೊತ್ತಾಗಿತ್ತು.
  ಬಳಿಕ ಘಟನೆಗೆ ಸಂಬಂಧಿಸಿದಂತೆ ವೆಂಕಟೇಶ್ ಅವರ ವಿರುದ್ಧ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ವಿದ್ಯುತ್ ಕಾಯಿದೆ ಸೆಕ್ಷನ್ 135, ವನ್ಯ ಜೀವಿಯ ಪ್ರಾಣಕ್ಕೆ ಹಾನಿಯಾಗಿದ್ದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆ 429 ಮತ್ತು ಅಭಯಾರಣ್ಯದಲ್ಲಿ ಪ್ರಾಣಿಗಳ ಬೇಟಿಯಾಡಿದ ಆರೋಪದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯಿದೆ 51ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಬೇಟೆ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ: ವಿಚಾರಣಾ ನ್ಯಾಯಾಲಯ ಆರೋಪಿ ವೆಂಕಟೇಶ್ ವಿರುದ್ಧ ಎಲ್ಲ ಸೆಕ್ಷನ್‌ಗಳ ಅಡಿ ಶಿಕ್ಷೆಯನ್ನು ವಿಧಿಸಿ 10 ಸಾವಿರ ರೂ.ಗಳ ದಂಡವನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ, ಅರ್ಜಿದಾರ ವೆಂಕಟೇಶ್ ಪರವಾಗಿ ವಾದ ಮಂಡಿಸಿದ್ದ ವಕೀಲರು, ಅರ್ಜಿದಾರರ ಪ್ರಾಣಿಗಳನ್ನು ಬೇಟಿಯಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ವಾದ ಮಂಡಿಸಿದ್ದರು.
  ಅಲ್ಲದೆ, ಅರೋಪಿಯನ್ನು ಪ್ರಕರಣದಲ್ಲಿ ಸಿಲುಕಿಸಲು ತತ್‌ಕ್ಷಣಕ್ಕೆ ಅಧಿಕಾರಿಗಳು ಮನಸ್ಸಿಗೆ ಬಂದ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ, ಅಭಯಾರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡಿದ್ದ ಆರೋಪವನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳಿಲ್ಲ ಎಂದು ವಾದ ಮಂಡಿಸಿದ್ದರು.ಶಿಕ್ಷೆ ರದ್ದು: ಈ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್, ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿ ಆನೆ ಸಾವನ್ನಪ್ಪುವುದಕ್ಕೆ ಕಾರಣ ಆಗಿರುವುದನ್ನು ಅಭಯಾರಣ್ಯದಲ್ಲಿ ವನ್ಯಜೀವಿಗಳ ಬೇಟೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದಿದೆ. ಅಲ್ಲದೆ, ಪ್ರಾಣಿಯನ್ನು ಕೊಲ್ಲುವುದಕ್ಕಾಗಿಯೇ ತನ್ನ ಜಮೀನಿನ ಸುತ್ತ ಬೇಲಿ ಹಾಕಲಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆರೋಪಿಯ ವಿರುದ್ಧ ವನ್ಯಜೀವಿ ಕಾಯಿದೆ ಸೆಕ್ಷನ್ 51ರ ಅಡಿ ವಿಧಿಸಿರುವ ಶಿಕ್ಷೆ ಸಮರ್ಥವಾಗಿಲ್ಲ. ಹೀಗಾಗಿ ಈ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
  ಆದರೆ, ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿರುವುದು ಮತ್ತು ಅದರ ಕಾರಣದಿಂದ ಪ್ರಾಣಿಯೊಂದು ಸಾವನ್ನಪ್ಪಿದೆ. ಈ ರೀತಿಯ ಘಟನೆ ನಡೆಯಬಹುದು ಎಂದು ವಿದ್ಯುತ್ ಬೇಲಿ ಅಳವಡಿಸುವ ಸಂದರ್ಭದಲ್ಲಿ ಅರ್ಜಿದಾರರಿಗೆ ಗೊತ್ತಿದ್ದರೂ ಅಳವಡಿಸಿದ್ದಾರೆ. ಹೀಗಾಗಿ ಪ್ರಾಣಿಯ ಸಾವಿಗೆ ಅರ್ಜಿದಾರರೇ ಹೊಣೆಗಾರರಾಗಿದ್ದಾರೆ. ಆದ್ದರಿಂದ ವಿದ್ಯುತ್ ಕಾಯಿದೆ ಮತ್ತು ಐಪಿಸಿ ಕಾಯಿದೆಗಳ ಅಡಿ ಶಿಕ್ಷೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಸಮಂಜಸವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

  300x250 AD
  Share This
  300x250 AD
  300x250 AD
  300x250 AD
  Back to top