ಸಿದ್ದಾಪುರ : ಯಕ್ಷಗಾನವೆಂಬುದು ಪಾರಂಪರಿಕ ಕಲೆ. ಯಕ್ಷಗಾನ ಪ್ರದರ್ಶನದೊಂದಿಗೆ ಯಕ್ಷಗಾನದ ಅಧ್ಯಯನ, ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆ, ಅವಲೋಕನ, ಕಮ್ಮಟದಂತಹ ಕಾರ್ಯಕ್ರಮಗಳು ಯಕ್ಷಗಾನ ಕಲೆ ಶೈಕ್ಷಣಿಕ ವಲಯದಲ್ಲಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ
ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ 20 ಯಕ್ಷಗಾನ ಕಾರ್ಯಕ್ರಮದ ಪ್ರಥಮ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಯಕ್ಷಗಾನ ರಮ್ಯಾದ್ಭುತವಾದ ಕಲೆಯಾಗಿದೆ. ಶತಮಾನಗಳ ಹಿಂದಿನಿಂದಲೇ ಹಲವು ಕಾಲಕ್ಕೆ ತಕ್ಕ ಪರಿಷ್ಕರಣೆಯೊಂದಿಗೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ಪರಿಪೂರ್ಣ ಕಲೆಯಾಗಿ ಗುರುತಿಸಿಕೊಂಡಿರುವ ಯಕ್ಷಗಾನ ಎಂದೆಂದಿಗೂ ಶ್ರೀಮಂತ ಕಲೆಯಾಗಿದೆ. ಹಿಂದೆ ಯಕ್ಷಗಾನವನ್ನು ದಿನನಿತ್ಯ ನೋಡಿಕೊಂಡೇ ಅಭ್ಯಾಸ ಮಾಡಬೇಕಿತ್ತು. ಆದರೆ, ಈಗ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಯಲು ಹಲವಾರು ಅವಕಾಶಗಳಿವೆ. ಯಕ್ಷಗಾನದ ಸತ್ವವನ್ನು ಅರ್ಥ ಮಾಡಿಕೊಂಡು ಮುನ್ನಡೆಸೋಣ ಎಂದು ಹೇಳಿದರು.
ನಾಣಿಕಟ್ಟಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಬಿ. ಹೆಗಡೆ ಮಾತನಾಡಿ ಹಿಂದೂ ಧರ್ಮದ ಮೌಲ್ಯಗಳು, ಬದುಕಿನ ಉತ್ಥಾನ, ವಿಕಾಸವನ್ನು ಸಮರ್ಥವಾಗಿ ಸಮಾಜದಲ್ಲಿ ಗಟ್ಟಿಗೊಳಿಸುವಲ್ಲಿ ಯಕ್ಷಗಾನ ಕಲೆ ಪ್ರಭಾವ ಬೀರಿದೆ. ಇದಕ್ಕೆ ಇನ್ನಷ್ಟು ಬುನಾದಿ ಹಾಕುವ ನಿಟ್ಟಿನಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಏರ್ಪಡಿಸಿದ 20 ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಶ್ಲಾಘನೀಯ ಎಂದರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸ್ಥಳಿಯ ಭಾಗ್ವತರಾದ ಶಂಕರ್ ಭಾಗವತ, ವಿದ್ಯಾದರ ರಾವ್ ಜಲವಳ್ಳಿ, ಹಾಗೂ ಅಶೋಕ್ ಭಟ್ ಸಿದ್ದಾಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಪುಟ್ಟ ಪುಟಾಣಿ ಮಕ್ಕಳ ಸಂಗೀತ ಹಾಗೂ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈ ಸಂದರ್ಭದಲ್ಲಿ ಸುಭಾಷ ನಾಯ್ಕ ಕಾನಸೂರು, ಕಾನಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶಾನಭಾಗ್ , ವಿನಾಯಕ ಶಾನಭಾಗ್, ಶಶಿಕಾಂತ ನಾಮಧಾರಿ ,ಸ್ಥಳಿಯ ಗ್ರಾಂ ಪಂಚಾಯತ್ ಉಪಾಧ್ಯಕ್ಷೆ, ಊರಿನ ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಕಲಾ ಅಭಿಮಾನಿಗಳು ಉಪಸ್ಥಿತರಿದ್ದರು.