Slide
Slide
Slide
previous arrow
next arrow

ಜ.18ಕ್ಕೆ ಯಡಹಳ್ಳಿ ಸೊಸೈಟಿ ಅಮೃತ ಮಹೋತ್ಸವ

300x250 AD

ಶಿರಸಿ: ಉತ್ತರ ಕನ್ನಡದ ಪ್ರಮುಖ ಪ್ರಾಥಮಿಕ ಪತ್ತಿನ ಸೇವಾ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ಯಡಹಳ್ಳಿಯ ಕಾನಗೋಡ್ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭ ಹಾಗೂ ರೈತ ಸದಸ್ಯರಿಗೆ ಹಲವು ಯೋಜನೆಗಳಿಗೆ ಚಾಲನೆ, ಸಮ್ಮಾನ, ಸದಸ್ಯರಿಗೆ ನೆರವಿನ ಹಸ್ತದ ಕಾರ್ಯಕ್ರಮಗಳನ್ನು ಜ.18ರಂದು ಯಡಹಳ್ಳಿಯಲ್ಲಿ ಬೆಳಿಗ್ಗೆ 10ರಿಂದ ಹಮ್ಮಿಕೊಳ್ಳಲಾಗಿದೆ.
ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಇಡೀ ದಿನ ಹಬ್ಬದ ಮಾದರಿಯಲ್ಲಿ ಎಲ್ಲ ಸದಸ್ಯರೂ ಸೇರಿ ಆಚರಿಸಲಾಗುತ್ತಿದೆ. ಸಂಘದ ಹಿನ್ನೋಟ ಹಾಗೂ ಭವಿಷ್ಯದ ಬೆಳಕು ಕಂಡುಕೊಳ್ಳುವ ಕ್ಷಣವಾಗಲಿದೆ ಎಂದು ಹೇಳಿದರು.
ಸಹಕಾರವೇ ಉಸಿರು:
ಸಂಘವನ್ನು ಕಳೆದ 75 ವರ್ಷಗಳ ಹಿಂದೆ ರೈತ ಸದಸ್ಯರಿಗೆ ನೆರವಾಗಬೇಕು ಎಂದೇ ಬಹುಮುಖಿ ಚಿಂತನೆ ನಡೆಸಿ ಸ್ಥಾಪಿಸಿದ್ದಾರೆ. 13 ಜನರಿಂದ ಆರಂಭಗೊoಡು ಅಂದಿನಿoದ ಇಂದಿನ ತನಕ 1500ಕ್ಕೂ ಅಧಿಕ ಜನರಿಗೆ ಸಹಕಾರಿ ತತ್ವದಲ್ಲಿ ನೆರವಾಗುತ್ತಿದೆ. ಈಗಾಗಲೇ ಎರಡು ಶಾಖೆಗಳು, ಕಿರಾಣಿ, ಪಡಿತರ, ಕೃಷಿ ಉಪಕರಣಗಳು, ಗೊಬ್ಬರ, ಕೃಷಿ ಔಷಧಗಳನ್ನೂ ಸದಸ್ಯರಿಗೆ ಒದಗಿಸಲಾಗುತ್ತಿದೆ. ಲಾಭದ ಉದ್ದೇಶವನ್ನು ಮಾತ್ರ ಇಟ್ಟುಕೊಳ್ಳದೇ 1948ರಿಂದ ಈವರೆಗೂ ಸಹಕಾರ ತತ್ವದಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಯಡಹಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿದ ಬಳಿಕ 1971ರಿಂದಲೇ ಸಂಘದಲ್ಲಿ ಉಪ ಮಾರುಕಟ್ಟೆ ಪ್ರಾಂಗಣವಾಗಿ ಕೂಡ ಅಡಿಕೆ, ಕಾಳುಮೆಣಸು, ಏಲಕ್ಕಿ ಟೆಂಡರ್ ವಹಿವಾಟು ನಡೆಸಲಾಗುತ್ತಿದೆ. ವಹಿವಾಟು ಆದ ದಿನವೇ ರೈತರ ಖಾತೆಗೆ ಹಣ ಕೂಡ ಸಂದಾಯ ಮಾಡಲಾಗುತ್ತದೆ. ರೈತರ ಕಷ್ಟಕ್ಕೆ ನೆರವಾಗುವದು ಮಾತ್ರವಲ್ಲ, ಆರ್ಥಿಕ ಬಲವರ್ಧನೆಗೂ ಸಂಘ ನೆರವಾಗಿ ಅವರ ಕುಟುಂಬದ ಸದಸ್ಯನಂತೆ ಸಂಸ್ಥೆ ಕೆಲಸ ಮಾಡುತ್ತಿದೆ. ಕಷ್ಟಕ್ಕೆ ಕೈ ಹಿಡಿದು ಮುನ್ನಡೆಸುತ್ತಿದೆ ಎಂದೂ ಉಲ್ಲೇಖಿಸಿದರು.
ಕೃಷಿಕರು ಜಮೀನು ಮಾರಾಟ ಮಾಡಬಾರದು, ಸಮೃದ್ಧಿಯಾಗಿ ಬದುಕು ನಡೆಸಬೇಕು, ಕಷ್ಟ ಎಂದು ಬಂದರೆ ಸಂಸ್ಥೆ ನಿಲ್ಲಬೇಕು ಎಂಬುದು ನಮ್ಮ ಮೂಲ ಆಶಯವಾಗಿದೆ. ಇದೇ ಕಾರಣಕ್ಕೆ ಭತ್ತ ಒಕ್ಕುವ ಮಿಷನ್, ಟ್ರಾಕ್ಟರ್, ದೋಟಿಯಲ್ಲಿ ಕೊನೆ ಕೊಯ್ಯುವದು ಎಲ್ಲವೂ ಇಲ್ಲಿ ಸೇರಿದೆ ಎಂದರು.
ಅಮೃತ ಸಂಭ್ರಮ:
ಅಮೃತ ಮಹೋತ್ಸವ ವರ್ಷದಲ್ಲಿ ರೈತ ಸದಸ್ಯರಿಗೆ ಬೆಳ್ಳಿ ನಾಣ್ಯ, ಈ ವರ್ಷದ ಕ್ಯಾಲೆಂಡರ್, ಪ್ರತಿ ವರ್ಷದಂತೆ ಈ ವರ್ಷವೂ ಬಗ್ಗೋಣ ಪಂಚಾಂಗ ಉಚಿತವಾಗಿ ನೀಡಲಾಗುತ್ತದೆ. ಅನಾರೋಗ್ಯ ಉಳ್ಳವರ ನೆರವಿಗಾಗಿ ವಾಟರ್ ಬೆಡ್, ಗಾಲಿ ಖುರ್ಚಿ, ಮಂಚಗಳನ್ನೂ ವ್ಯವಸ್ಥೆ ಮಾಡಲಾಗಿದ್ದು, ಅದನ್ನೂ ಉದ್ಘಾಟಿಸಲಾಗುತ್ತದೆ. ಸಂಘದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಅಮೃತ ಸಿಂಚನ ಎಂಬ ಸ್ಮರಣ ಸಂಚಿಕೆ ಕೂಡ ತರಲಾಗುತ್ತಿದೆ. ಕೆರೆಗಳ ಅಭಿವೃದ್ಧಿ, ಬೆಟ್ಟದ ಅಭಿವೃದ್ಧಿ ಕುರಿತೂ ಅನೇಕ ಯೋಜನೆಗಳನ್ನು ಈ ವೇಳೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಮೃತ ಮಹೋತ್ಸವಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಜಿ.ಆರ್.ಹೆಗಡೆ ಬೆಳ್ಳೇಕೇರಿ ವಹಿಸಿಕೊಳ್ಳಲಿದ್ದಾರೆ. ಅಮೃತ ಸಿಂಚನ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಸದಸ್ಯರಿಗೆ ಸಮ್ಮಾನ, ಉಡುಗೊರೆ ವಿತರಣೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾಡಲಿದ್ದಾರೆ. ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ
ಯಡಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ಗೌಡ, ಕಾನಗೋಡ ಪಂಚಾಯ್ತಿ ಅಧ್ಯಕ್ಷೆ ಗೀತಾ ಪೂಜಾರಿ, ಸಹಕಾರಿ ನಿಬಂಧಕ ಮಂಜುನಾಥ ಆರ್. ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು, ಬಳಿಕ ಸಂಘದ ವ್ಯಾಪ್ತಿಯ ಕಲಾವಿದರು, ಆಸಕ್ತರು ಸಾಂಸ್ಕೃತಿಕ ವೈವಿಧ್ಯ ನಡೆಸಿಕೊಡಲಿದ್ದಾರೆ. 72 ಕಲಾವಿದರು 3 ಗಂಟೆಗಳ ಕಾರ್ಯಕ್ರಮ ನೀಡಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಮುರಳೀಧರ ಹೆಗಡೆ ಕಲ್ಲಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top