ಶಿರಸಿ: ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ದೇಶಭಕ್ತಿ, ಬಡವರು, ಶೋಷಿತ ವರ್ಗಗಳ ಪರ ಕಾಳಜಿ, ನೆಲ, ಭಾಷೆ, ಜಲದ ಮೇಲಿನ ಪ್ರೀತಿ, ಜೀವನಾಸಕ್ತಿ ಹೊಂದಿರುವ ಅಪರೂಪದ ವ್ಯಕ್ತಿ. ಶ್ರೀಮಂತ ಅನುಭವ ಹೊಂದಿರುವ ಕಾಗೇರಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಭಾನುವಾರ ನಗರದಲ್ಲಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಹಾಗೂ ‘ನಮ್ಮ ಹೆಮ್ಮೆ ನಮ್ಮ ಕಾಗೇರಿ’ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಗೇರಿ ಅವರು ಹಗಲಿರುಳು ದುಡಿದು ಜನಜೀವನಕ್ಕೆ ಬಂದ ಅಪರೂಪದ ವ್ಯಕ್ತಿ. ಅವರ ಸಂಘಟನಾ ಕೌಶಲ್ಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಅವರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಯಾವುದೇ ಒತ್ತಡಕ್ಕೆ ಮಣಿಯದೇ ತಮ್ಮ ಕಠಿಣ ನಿಲುವಿಗೆ ಹೆಸರುವಾಸಿಯಾಗಿ ಅವರು ಜನರ ಸಮಸ್ಯೆಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಕಳೆದ ಆರು ಅವಧಿಗಳಲ್ಲಿ ಶಿರಸಿಯನ್ನು ಪ್ರತಿನಿಧಿಸಿರುವ ಅವರು ಏಳನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಎಂದರು.
ಕಾಗೇರಿ ಅವರು ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ವಿಷಯಾಧಾರಿತ ಚರ್ಚೆಗಳಲ್ಲಿ ಅವರು ಗಟ್ಟಿತನ ತೋರಿಸಿದ್ದರು ಆದರೆ ಸ್ನೇಹಕ್ಕೆ ಕೊರತೆಯಿಲ್ಲ. ಕಾಗೇರಿ ಅವರಿಗೆ ಯಾವುದೇ ಹುದ್ದೆಯ ಮೇಲೆ ವ್ಯಾಮೋಹ ಇಲ್ಲದೇ,ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಸವರಾಜ ಹೊರಟ್ಟಿ ಮತ್ತು ಕಾಗೇರಿ ಇಬ್ಬರೂ ಶಿಕ್ಷಣ ಸಚಿವರಾಗಿ ಕೆಲಸ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಹೊರಟ್ಟಿ, ಶಿವರಾಮ ಹೆಬ್ಬಾರ್, ಸಿ.ಸಿ.ಪಾಟೀಲ್. , ಕೋಟ ಶ್ರೀನಿವಾಸ ಪೂಜಾರಿ, ಆರ್.ವಿ.ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.