ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸೆಲ್ಕೋ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ್ ಹೆಗಡೆ ಉದ್ಘಾಟಿಸಿದರು. ಅಲ್ಲದೇ ಕಾಲೇಜ್ ವಿದ್ಯಾರ್ಥಿಗಳಿಂದ ರೂಪುಗೊಂಡ ಹಸ್ತಪತ್ರಿಕೆ ‘ಛಾತ್ರ ಸಂಪದ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರ ಮನಸ್ಸಿನಲ್ಲಿ ಇದು ನಮ್ಮ ವಿದ್ಯಾಲಯ ಎಂಬ ಭಾವನೆ ಬರದೇ ಇದ್ದರೆ, ಯಾವ ಸಾಧನೆಯೂ ಯಾರಿಗೂ ಸಾಧ್ಯವಾಗದು. ನಮ್ಮ ವಿದ್ಯಾಲಯ ಎನ್ನುವ ಭಾವನೆ ಬರಬೇಕೆಂದರೆ ಅದಕ್ಕೆ ಮಹಾತಪಸ್ಸು ಬೇಕು. ಶಿಲೆಗೆ ಉಳಿಪೆಟ್ಟು ಕೊಟ್ಟು ಮೂರ್ತಿಯನ್ನಾಗಿ ಮಾಡುವ ಯೋಗ್ಯತೆ ಶಿಲ್ಪಿಗೆ ಹೇಗೆ ಮಹತ್ವದ್ದೋ, ಹಾಗೆಯೇ ಅದ ಶಿಲೆಗೂ ಮೂರ್ತಿಯಾಗುವ ಯೋಗ್ಯತೆ ಕೂಡ ಇರಬೇಕಾದ್ದು ಅಷ್ಟೇ ಅವಶ್ಯಕ.. ಹೆಚ್ಚು ಪೆಟ್ಟು ತಿಂದ ಶಿಲೆಯೇ ದೇವರ ಮೂರ್ತಿಯಾಗುವುದು. ಸಮಸ್ಯೆಗಳನ್ನು ಸಂಭ್ರಮದಿಂದ ಸ್ವಾಗತಿಸಿಬೇಕು. ಯಾವಾಗಲೂ ಒಂದು ಸಮಸ್ಯೆ ಸಮರ್ಥರಿಗೆ ಮಾತ್ರ ಬರುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ, ಡಾ.ಏ. ಪಿ. ಜೆ. ಅಬ್ದುಲ್ ಕಲಾಂ, ಧ್ರುವಕುಮಾರ, ಗ್ರೇಟರ್ ತೆನ್ಬರ್ಗ್ ಇವರ ಜೀವನಾದರ್ಶಗಳನ್ನು ವಿವರಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರೊ. ಜಿ. ಡಿ. ಭಟ್ ಮಾತನಾಡಿ, ನಮಗೆ ಯಾವುದೇ ಸಾಧನೆ ಮಾಡಲು ಆರೋಗ್ಯ ತುಂಬಾ ಮಹತ್ವದ್ದು. ಈ ದಿಶೆಯಲ್ಲಿ ದೈನಂದಿನ ವ್ಯಾಯಾಮ ಸಹಕಾರಿ ಎನ್ನುತ್ತ, ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು..
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್ ರವರು ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು..
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಿಂಧು ಸದಾನಂದ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು.. ಕಾಲೇಜಿನ ಪ್ರಾಂಶುಪಾಲರಾದ ಡಿ. ಎನ್. ಭಟ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಬಳಿಕ ಕಾಲೇಜಿನ ವಿದ್ಯಾರ್ಥಿ ಸಂಘದ ಮುಂದಾಳತ್ವದಲ್ಲಿ ಜರುಗಿದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.. ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಹರ್ಷಿತಾ ಎಸ್. ವಿ., ಭೌತಶಾಸ್ತ್ರ ಉಪನ್ಯಾಸಕರೂ, ಕಾಲೇಜಿನ ಕ್ರೀಡಾ ವಿಭಾಗದ ಸಂಚಾಲಕರೂ ಆದ ಜೋಸ್ಟೋಮ್ ಏ. ಟಿ., ಗಣಿತಶಾಸ್ತ್ರ ಉಪನ್ಯಾಸಕ ಹರ್ಷ ಗಣೇಶ ಉಪಾಧ್ಯಾಯ ನಡೆಸಿಕೊಟ್ಟರು.. ರಸಾಯನಶಾಸ್ತ್ರ ಉಪನ್ಯಾಸಕ ಈಶ್ವರ ಶರ್ಮ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ನಯನ ವಂದಿಸಿದರು..
ಕಾಲೇಜಿನ ಆಡಳಿತ ಮಂಡಳಿಯ ಪದಾಧಿಕಾರಿ ಡಾ. ಶಂಕರ್ ಭಟ್, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡವು.
ಸಮರ್ಥರಿಗೆ ಮಾತ್ರ ಸಮಸ್ಯೆಗಳು ಬರುತ್ತವೆ, ಸಂತೋಷದಿ ಸ್ವೀಕರಿಸಿ: ಮೋಹನ್ ಹೆಗಡೆ
