ಭಟ್ಕಳ : ದೇವಸ್ಥಾನ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿಯಾದರೆ ಒಂದು ಗ್ರಾಮವೇ ಅಭಿವೃದ್ಧಿ ಆದಂತೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ವಿಷ್ಣುಮೂರ್ತಿ ಗಣಪತಿ ದೇವಸ್ಥಾನದಲ್ಲಿ ವರ್ಧಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇವಸ್ಥಾನ, ಶ್ರದ್ಧಾಕೇಂದ್ರಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ ತರುತ್ತದೆ. ಪ್ರತಿ ದೇವಸ್ಥಾನ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಆಶಯ. ಹೂತ್ಕಳದ ಧನ್ವಂತರಿ ಕ್ಷೇತ್ರ ಶಕ್ತಿ ಕ್ಷೇತ್ರವಾಗಿದ್ದು, ಇದರ ಅಭಿವೃದ್ಧಿ ಕಾರ್ಯಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸುವುದಾಗಿ ಹೇಳಿದ್ದಲ್ಲದೇ ದೇವಸ್ಥಾನದ ಅಭಿವೃದ್ಧಿಗೆ ವಯಕ್ತಿಕವಾಗಿ 5 ಲಕ್ಷ ರೂಪಾಯಿ ಘೋಷಿಸಿದರು. ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ ಗಾಣಿಗ ಮಾತನಾಡಿ, ಧನ್ವಂತರಿ ಕ್ಷೇತ್ರ ಮಹಾವಿಷ್ಣುವಿನ ಶಕ್ತಿಯ ಕ್ಷೇತ್ರವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಿದ್ದು, ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದರು. ವೆ.ಮೂ. ನೀಲಕಂಠ ಉಪಾಧ್ಯಾಯ ಧನ್ವಂತರಿ ಕ್ಷೇತ್ರದ ಇತಿಹಾಸ ಮತ್ತು ಮಹಿಮೆ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ, ಉದ್ಯಮಿ ಕಿರಣ ಧರ್ಮಸ್ಥಳ ಮಾತನಾಡಿದರು. ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ಮಾಸ್ತಿ ಗೊಂಡ, ಧನ್ವಂತರಿ ದೇವಸ್ಥಾನ ಪ್ರಧಾನ ಅರ್ಚಕ ಶಂಕರ ಭಟ್ಟ ಉಪಸ್ಥಿತರಿದ್ದರು. ದಿನೇಶ ಗಾಣಿಗ ಸ್ವಾಗತಿಸಿದರೆ, ವಿನಾಯಕ ಭಟ್ಟ ಬೆಟ್ಕೂರು ವಂದಿಸಿದರು. ವಿನಾಯಕ ಭಟ್ಟ ನಿರೂಪಿಸಿದರು. ದೇವಸ್ಥಾನ ವರ್ಧಂತ್ಯುತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಡಾ. ಗಣೇಶ ಭಟ್ಟ ಅವರಿಂದ ಉಪನ್ಯಾಸ, ನಾಟಿ ವೈದ್ಯ ಕೇಶವ ಭಂಡಾರಿ ಅವರಿಗೆ ಸನ್ಮಾನ, ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ ನಡೆಯಿತು.