ಹೊನ್ನಾವರ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊದ್ಕೆ ಶಿರೂರು- ಕಡ್ನೀರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದ್ಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಹೊದ್ಕೆ- ಶಿರೂರು ಹಾಗೂ ಕಡ್ನೀರು ಪ್ರೌಢಶಾಲೆಯು ಶೈಕ್ಷಣಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಈ ಭಾಗದ ಗ್ರಾಮಸ್ಥರು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವವರಾಗಿದ್ದು, ಶಾಲೆಯ ಅಭಿವೃದ್ಧಿಗಾಗಿ, ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗಾಗಿ ನೀಡುತ್ತಿರುವ ಸಹಕಾರ ಇತರೆಲ್ಲರಿಗೂ ಮಾದರಿಯಾದುದಾಗಿದೆ ಎನ್ನುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣಕ್ಕೆ, ಚಂದಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನೀಡಿದ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ಶಿಕ್ಷಕರಿಗೆ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಚಂದಾವರ ಗ್ರಾ.ಪಂ. ಅಧ್ಯಕ್ಷೆ ಛಾಯಾ ಉಭಯಕರ್, ಸದಸ್ಯರಾದ ಅಣ್ಣಪ್ಪ ನಾಯ್ಕ್ಲ, ಹನುಮಂತ ನಾಯ್ಕ, ವಿನಯಾ ನಾಯ್ಕ, ಪ್ರೇಮಾ ನಾಯ್ಕ, ಗಣಪಿ ಮುಕ್ರಿ, ಅಶ್ವಿನಿ ನಾಯ್ಕ್ ನ್ಯಾಯವಾದಿ ಕೆ.ವಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ದೀಪಕ್ ನಾಯ್ಕ, ಮುಖ್ಯ ಶಿಕ್ಷಕ ವಿನಾಯಕ ಅವಧಾನಿ ಮತ್ತಿತರರು ಇದ್ದರು.