ಕುಮಟಾ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಮರಾಕಲ್ ಯೋಜನೆ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಕಲ್ ನೀರು ಸರಬರಾಜು ಯೋಜನೆಗೆ ಅಳವಡಿಸಿರುವ ಪೈಪ್ ಮತ್ತು ಇನ್ನಿತರೆ ಸಲಕರಣೆಗಳು ತೀರಾ ಹಳೇಯದ್ದಾಗಿದೆ. ಅವುಗಳನ್ನು ಬದಲಾಯಿಸಿ ಅತ್ಯಾಧುನಿಕ ಪೈಪ್ ಅಳವಡಿಸಲಾಗುವುದು. ನೀರಿನ ಒತ್ತಡ ಹೆಚ್ಚಿರುವ ಕಡೆಗೆ ವಿಶೇಷ ಗಮನ ಹರಿಸಿ, ಅಲ್ಲಿನ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶರಾವತಿ ನೀರು ಸರಬರಾಜು ಯೋಜನೆ ಜಾರಿಗೆ ಬರಲಿದ್ದು, ಹಾಗಾಗಿ ಅಮೃತ 2.0 ಯೋಜನೆ ಹಣವನ್ನು ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಬಳಸಲಾಗವುದು. ಯೋಜನೆಯ ರೂಪುರೇಷೆಗಳನ್ನು ಈಗಾಗಲೇ ಸಿದ್ಧಗೊಳ್ಳುತ್ತಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.
ಹೊನ್ನಾವರ ಪಟ್ಟಣ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಕಾಮಗಾರಿಗಳ ಹೊರತಾಗಿ ಸರ್ಕಾರದ ವಿಶೇಷ ಯೋಜನೆಯಡಿ 2 ಪುರಸಭೆಗಳಿಗೆ ತಲಾ 5 ಕೋಟಿ ರೂ. ಮಂಜೂರಿಯಾಗಿದೆ. ಈ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಒಳಚರಂಡಿ ಕಾಮಗಾರಿಗಳು ಸದ್ಯ ಮುಂದುವರೆಸುವ ಪರಿಸ್ಥಿತಿ ಇಲ್ಲ ಎಂದು ಶಾಸಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೋರ್ಕೆ, ಕುಮಾರ ಮಾರ್ಕಾಂಡೆ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್, ಸ್ಥಾಯಿ ಸಮಿತಿ ಚೇರಮೆನ್ ಕಿರಣ ಅಂಬಿಗ್, ಸದಸ್ಯರಾದ ಶುಶೀಲಾ ಗೋವಿಂದ ನಾಯ್ಕ, ಸಂತೋಷ ನಾಯ್ಕ, ಪ್ರಮುಖರಾದ ಶಿವಾನಿ ಶಾಂತಾರಾಮ , ಜಿ ಐ ಹೆಗಡೆ, ಎನ್ ಎಸ್ ಹೆಗಡೆ, ಚೇತೇಶ ಶಾನಭಾಗ, ನಾಗರಾಜ ನಾಯಕ ಹಿತಲಮಕ್ಕಿ, ಕುಮಾರ ಕವರಿ, ಅನುರಾಧ ಭಟ್ ಇತರರು ಇದ್ದರು.