ಕುಮಟಾ: ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ಯುವಕ- ಯುವತಿಯರು ಆರ್ಥಿಕವಾಗಿ ಸ್ವಾವಲಂಬನೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕಲ್ಮೇಶ ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 13 ದಿನಗಳ ಸಿಸಿ ಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನದಲ್ಲಿ ಪ್ರತಿಯೊಂದು ಕಛೇರಿ, ಶಾಲೆ- ಕಾಲೇಜು, ಖಾಸಗಿ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಸಿಸಿ ಟಿವಿಯನ್ನು ಅಳವಡಿಸುತ್ತಿದ್ದಾರೆ. ಸಿಸಿ ಟಿವಿ ಅಳವಡಿಕೆ ಮತ್ತು ರಿಪೇರಿ ಉದ್ಯೋಗಕ್ಕೆ ಇಂದಿನ ದಿನದಲ್ಲಿ ಅಪಾರವಾದ ಬೇಡಿಕೆಯಿದೆ ಎಂದರು.
ತರಬೇತಿ ಸಂಸ್ಥೆಯ ನಿರ್ದೇಶಕ ರವಿ ಜಿ.ಕೆ. ಮಾತನಾಡಿ, ಸಿಸಿ ಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ನಾವು ಈ ತರಬೇತಿಯನ್ನು ಪ್ರಾರಂಭಿಸಿದ್ದೇವೆ. ತರಬೇತಿಯನ್ನು ಊಟ, ವಸತಿ ಜೊತೆಗೆ ಉಚಿತವಾಗಿ ನೀಡುವುದರ ಮೂಲಕ ಉದ್ಯಮಶೀಲತಾ ತರಬೇತಿಯನ್ನು ನೀಡುತ್ತೇವೆ ಎಂದು ತಿಳಿಸಿದರು.
ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕ ಕಾರ್ಯಕ್ರಮದ ಸ್ವಾಗತ ಮತ್ತು ಧನ್ಯವಾದ ಅರ್ಪಿಸಿದರು. ಶಿಬಿರಾರ್ಥಿ ಬಸಪ್ಪ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸಂತೋಷಕುಮಾರ ಉಪಸ್ಥಿತರಿದ್ದರು.