ಶಿರಸಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಸ್ವಾಮಿ ವಿವೇಕಾನಂದರ 160ನೇ ಜಯಂತಿಯ ನಿಮಿತ್ತ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್‌ಪಿ ಗಣೇಶ ಕೆ.ಎಲ್. ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಅಂದುಕೊಂಡ ಗುರಿ ಮುಟ್ಟುವವರೆಗೂ ನಿರಂತರ ಪ್ರಯತ್ನ ಪಡಬೇಕು ಹಾಗೂ ಕಾನೂನಿನ ಚೌಕಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹಿತವಚನ ನುಡಿದರು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ರತ್ನಾ ಎಸ್.ಕೆ. ಮಾತನಾಡಿ, ಭಾರತದ ಭವಿಷ್ಯದ ಪ್ರಜೆಗಳಾದ ಮುದ್ದಿನ ವಿದ್ಯಾರ್ಥಿಗಳು ಜಗತ್ತಿಗೆ ವಿಶ್ವಗುರು ಆಗುವಂತೆ ತಮ್ಮನ್ನು ಅಣಿಗೊಳಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳು ಎಲ್ಲ ದುಶ್ಚಟಗಳಿಂದ ದೂರವಿದ್ದು ಅದಮ್ಯ ಸಾಧನೆಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಜೀವನವನ್ನು ಮೌಲ್ಯಯುತವಾಗಿಸಿಕೊಳ್ಳಬೇಕು ಎಂದು ಕಿವಿಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕ ಮಧುಸೂದನ್ ಹೆಗಡೆ, ಭಾರತದ ಹಿರಿಮೆಯನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಾಗೂ ಅವರು ಬದುಕಿದ ಪರಿಯನ್ನು ಅರ್ಥೈಸಿಕೊಳ್ಳಬೇಕು. ಅವರು ನುಡಿದ ಪ್ರತಿಯೊಂದು ಪದದ ಹಿಂದೆ ಅಡಗಿದ ದಿವ್ಯತೆಯನ್ನು, ಶಕ್ತಿಯನ್ನು, ಆ ಶಕ್ತಿಯನ್ನು ಸಾಧಿಸಲು ಅವರು ಅನುಸರಿಸಿದ ಕಠೋರ ನಿಲುವನ್ನು, ಇಂದಿನ ಯುವಜನತೆ ಅರ್ಥೈಸಿಕೊಂಡು ನಡೆಯಬೇಕು. ನಕಾರಾತ್ಮಕ ಮನಸಿನಲ್ಲೂ ಸಕಾರಾತ್ಮಕ ಚಿಂತನೆಯ ಕಿಡಿಯನ್ನು ಹೊತ್ತಿಸುವ ಶಕ್ತಿ ಇರುವುದು ವಿವೇಕಾನಂದ ಅನ್ನುವ ಮಹಾನ ಚೆತನಕ್ಕೆ ಮಾತ್ರ ಸಾಧ್ಯ. ವ್ಯಕ್ತಿ ವ್ಯಕ್ತಿತ್ವದಿಂದ ಗುರುತಿಸಲ್ಪಡಬೇಕು ಹಾಗೂ ಆದ್ಯಾತ್ಮಿಕ ಚಿಂತನೆಯಿಂದ ಗುರಿಯನ್ನು ಸಾಧಿಸಲು ದೃಢ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಜಿ.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಬೆಗಳನ್ನು ಗುರುತಿಸಿ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಬದುಕನ್ನು ಹಾಗೂ ಭವ್ಯ ಭಾರತವನ್ನು ಕಟ್ಟುವಂತ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಗುರಿ ತಲುಪಲು ಬೇಕಾದಂತಹ ದೃಢ ಸಂಕಲ್ಪ ಹಾಗೂ ಅದನ್ನು ಸಾಧಿಸಲು ಅನುಸರಿಸಬೇಕಾದ ಮಾರ್ಗಗಳನ್ನು ನಮಗೆ ಸಾಕಷ್ಟು ಮಹನಿಯರು ತಮ್ಮ ಬದುಕಿನ ಮೂಲಕ ಹೆಳಿಕೊಟ್ಟಿದಾರೆ. ಅಂಥ ಮಹನಿಯರಲ್ಲಿ ಸ್ವಾಮಿ ವಿವೇಕಾನಂದರು ಕೂಡ ಓರ್ವರು. ಅವರ ಆದರ್ಶಗಳು ಹಾಗೂ ಬದುಕಿದ ರೀತಿ ನಮ್ಮ ಯುವ ಜನತೆಗೆ ಮಾದರಿ. ಅವರ ಆದರ್ಶದ ನೆರಳಿನಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳಬೇಕು, ಆ ಮೂಲಕ ದೇಶದ ಸೇವೆಯಲ್ಲಿ ನಾವೆಲ್ಲರು ಕೂಡ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅಖಂಡ ಭಾರತದ ನಿರ್ಮಾಣದ ಕನಸನ್ನು ಹೊಂದಿದ್ದ ಮಹನಿಯರ ಕನಸನ್ನು ಈಡೇರಿಸಲು ನಮ್ಮ ಪ್ರಯತ್ನವನ್ನು ಪಡಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಸತೀಶ ಎನ್.ನಾಯ್ಕ ಸ್ವಾಗತಿಸಿದರು. ರೇಂಜರ್ ಕ್ಯಾಪ್ಟನ್ ವಿಜಯಲಕ್ಷ್ಮಿ ದಾನರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ವಸಂತ ನಾಯ್ಕ ವಂದಿಸಿದರು. ರೋವರ್ಸ ಲೀಡರ್ ಡಾ.ಲೊಕೇಶ ಸಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೀತಾ ಹೆಗಡೆ ನಿರೂಪಿಸಿದರು ಹಾಗೂ ನಿಕಿಲಾ ಹೆಗಡೆ ಮತ್ತು ನೇಹಾ ಎಮ್ ಪ್ರಾರ್ಥಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.