ಶಿರಸಿ: ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಏಳ್ಗೆಗೆ ಶ್ರಮಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಕರೆ ನೀಡಿದರು.
ಬಚಗಾಂವ ರಸ್ತೆಯ ಮನಿಯಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ 4ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಜಯಗಳಿಸುವ ಎಲ್ಲ ಸಾಧ್ಯತೆ ಗಳಿರುವುದರಿಂದ ಜೆಡಿಎಸ್‌ನ ಎಲ್ಲ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯ್ಯದ್ ಮುಜೀಬ್ ಮಾತನಾಡಿ, ಕುಮಾರಸ್ವಾಮಿಯವರು ಅಲ್ಪಸಂಖ್ಯಾತರಿಗೆ ಒಳ್ಳೆಯ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ 123ಕ್ಕೂ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಪಕ್ಷ ಗೆಲವು ಸಾಧಿಸಿದಲ್ಲಿ ಅಲ್ಪಸಂಖ್ಯಾತರಿಗೇ ಮುಖ್ಯಮಂತ್ರಿಸ್ಥಾನವನ್ನು ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬುದನ್ನು ನೆನಪಿಸಿದರು. ಈ ಕಾರಣದಿಂದಾಗಿ ರಾಜ್ಯದಲ್ಲಿ ಬಹಳಷ್ಟು ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಘಟಕದ ತಾಲೂಕಾ ಅಧ್ಯಕ್ಷರನ್ನು ಹಾಗೂ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಹಾಗೂ ಬಾಕಿ ಉಳಿದ ಜಿಲ್ಲೆ ಮತ್ತು ರಾಜ್ಯದ ಪದಾಧಿಕಾರಿಗಳನ್ನು ಜಿಲ್ಲಾ ಪ್ರವಾಸದ ನಂತರ ಮುಖಂಡರ ಜೊತೆ ಚರ್ಚಿಸಿ ನೇಮಿಸಲಾಗುವುದು ಎಂದು ಹೇಳಿದರು.
ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಕ್ರಿಯಾ ಝಾಕಿರ್ ಪಕ್ಷದ ಸಂಘಟನೆಯ ಬಗ್ಗೆ ಒಳ್ಳೆಯ ಸಲಹೆ ಸೂಚನೆಗಳನ್ನು ನೀಡಿದರು. ಪಕ್ಷದ ಎಲ್ಲಾ ಸೆಲ್‌ಗಳಿಗೆ ಯುವಕರನ್ನು ತರಲು ಸೂಚಿಸಿದರು. ತಮ್ಮನ್ನು 8 ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಆಗಾಗ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದರು. ಮುಂಬರುವ ಚುನಾವಣೆಯಲ್ಲಿ ಉತ್ತರ ಕನ್ನಡದಲ್ಲಿ ಹೆಚ್ಚಿನ ಸೀಟ್‌ಗಳನ್ನು ಗೆಲ್ಲಿಸಲು ಅವಿರತವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನಾಗೇಶ ನಾಯ್ಕ ಹಾಗೂ ಇನಾಯತ್ ಉಲ್ಲಾ ಶಾಬಂದ್ರಿಯವರು ಒಳ್ಳೆಯ ಸಲಹೆ ಸೂಚನೆ ನೀಡಿ ಮುಂಬರುವ ಚುನಾವಣೆಗೆ ಸಿದ್ಧರಾಗಬೇಕು. ಪಕ್ಷದ ಗೆಲುವೆ ನಮ್ಮ ಗುರಿಯಾಗಲಿ ಎಂದರು. ನಮ್ಮ ಅಭ್ಯರ್ಥಿಗಳಿಗೆ ಜನರ ಬೆಂಬಲ ಹಾಗೂ ಆಶೀರ್ವಾದ ಸದಾ ಇದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ರಮೇಶ ನಾಯ್ಕ, ಉಪಾಧ್ಯಕ್ಷ ಜಿ.ಆರ್.ಪಟಗಾರ, ಕಾರ್ಯದರ್ಶಿ ವಿ.ಎಂ.ಭAಡಾರಿ ಹಾಗೂ ಎಲ್ಲಾ ತಾಲೂಕುಗಳ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳು ಮತ್ತು ಅಲ್ಪಸಂಖ್ಯಾತ ಘಟಕದ ಮುಖಂಡರು ಉಪಸ್ಥಿತರಿದ್ದರು. ಇಬ್ರಾಹಿಂ ಶೇಖ್ ಭಟ್ಕಳ, ನಗರಸಭೆ ಸದಸ್ಯರಾದ ಶೀಲು ಬ್ಲೇಜ್, ಇರ್ಷಾದ್ ಮಿರ್ಜಾನಕರ್, ರೆಹಮತ್ ಉಲ್ಲಾ ಕುಮಟಾ, ಇಲಿಯಾಸ್ ಶೇಖ್, ಅಲ್ತಾನಾ, ರಜಾಕ್ ಶೇಖ್, ಕಲೀಕ್ ಬನವಾಸಿ, ನಯೀಂ ಶುಂಟಿ, ಫಾಯಿಸ್ ಖಾಜಿ, ಅಪ್ಸರ್ ಮೂಡಿ, ಸಾದಿಕ್ ಚವಡಳ್ಳಿ ಮುಂಡಗೋಡ, ಬ್ಲೇಜ್ ವಾಜ್, ಜಿಲ್ಲಾ ಯುವ ಅಧ್ಯಕ್ಷ ಅರುಣ ಗೌಡ ಹಾಗೂ ಇನ್ನೂ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮುತಲ್ಲೀಬ ತೋನ್ಸೆ ಕಾರ್ಯಕ್ರಮ ನಿರ್ವಹಿಸಿದರು.