ಕುಮಟಾ: ರಸ್ತೆಯ ಮೇಲೆಯೇ ಪುನಃ ಕಾಂಕ್ರೀಟ್ ರಸ್ತೆ ನಿರ್ಮಿಸುವ ಜೊತೆಗೆ ಪಂಚಾಯತ್ ಸದಸ್ಯರೋರ್ವರ ತಾಯಿ ಮನೆಯ ಜಾಗಕ್ಕೆ ಕಂಪೌಂಡ್ ನಿರ್ಮಿಸಿಕೊಡುವ ಮೂಲಕ ಲಕ್ಷಾಂತರ ರೂ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಜಿಲ್ಲಾ ಪಂಚಾಯತ್ ಎಂಜಿನೀಯರಿಂಗ್ ವಿಭಾಗದ ಅಧಿಕಾರಿಗಳು ಮುಂದಾಗಿರುವ ಆರೋಪ ಕೇಳಿಬಂದಿದೆ.
ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಾಳಿಮನೆ ಓಣಿಯ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ಮಂಜೂರಾಗಿದ್ದು, ಇಲ್ಲಿನ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗಕ್ಕೆ ಈ ಕಾಮಗಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. 15 ಲಕ್ಷ ರೂ.ನಲ್ಲಿ 100 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಿಸುವ ಜೊತೆಗೆ ಹೊಲನಗದ್ದೆ ಗ್ರಾಪಂ ಸದಸ್ಯೆ ದೀಪಾ ಅವರಿಗೆ ಹಕ್ಕಿರುವ ಅವರ ತಾಯಿ ಮನೆಯ ಜಾಗಕ್ಕೆ ಕಂಪೌಂಡ್ ನಿರ್ಮಿಸಲು ಕಾಮಗಾರಿ ಆರಂಭಿಸಿದ್ದರು. ಈ ಕಂಪೌಂಡ್‌ನ್ನು ತಡೆಗೋಡೆ ಎಂದು ಸಂಬೋಧಿಸಿರುವ ಜಿಪಂ ಇಂಜಿನೀಯರಿಂಗ್ ವಿಭಾಗದ ಇಂಜಿನೀಯರ್ ಅವರು, ಈ ತಡೆಗೋಡೆ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ಈಗಾಗಲೇ ಇದ್ದ ಉತ್ತಮ ಕಾಂಕ್ರೀಟ್ ರಸ್ತೆಗೂ ಹಾನಿ ಮಾಡಿದ್ದಾರೆ. ಸರಿಯಿದ್ದ ರಸ್ತೆಯಲ್ಲಿ ಈಗ ಬೃಹತ್ ಬಿರುಕುಬಿಟ್ಟಿದ್ದು, ಬರುವ ಮಳೆಗಾಲದೊಳಗೆ ಆ ರಸ್ತೆ ಕೂಡ ಸಂಪೂರ್ಣ ಕಿತ್ತುಹೋಗುವ ಸಾಧ್ಯತೆ ಇದೆ. ಅಧಿಕಾರಿಗಳ ಈ ಕಳ್ಳಾಟವನ್ನು ಗಮನಿಸಿದ ಸ್ಥಳೀಯರು ಈ ಕಾಮಗಾರಿಯ ಬಗ್ಗೆ ಹೊಲನಗದ್ದೆ ಗ್ರಾಪಂಗೆ ದೂರು ಸಲ್ಲಿಸಿದ್ದಾರೆ. ತಕ್ಷಣ ಕಾಮಗಾರಿ ಪರಿಶೀಲಿಸಿದ ಹೊಲನಗದ್ದೆ ಗ್ರಾಪಂ ಸದಸ್ಯರು ಮತ್ತು ಪಿಡಿಒ ಅವರು ಸ್ಥಳೀಯರ ಆಕ್ಷೇಪವಿರುವುದರಿಂದ ಈ ಕಾಮಗಾರಿಯನ್ನು ನಿಲ್ಲಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ಕಾಮಗಾರಿ ಸ್ಥಗಿತಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಹೊಲನಗದ್ದೆ ಗ್ರಾಪಂ ಅಧ್ಯಕ್ಷೆ ಶುಭಲಕ್ಷ್ಮಿ ಹಳಕಾರ, ಮಲೆಯಾಳಿಮನೆ ರಸ್ತೆ ಅಭಿವೃದ್ದಿಗೆ ಹಣ ಮಂಜೂರಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅಲ್ಲಿನ ಕೆಲ ನಿವಾಸಿಗಳು ಸರ್ಕಾರದ ಹಣದಲ್ಲಿ ವೈಯಕ್ತಿಕ ಜಾಗಕ್ಕೆ ಕಂಪೌಂಡ್ ನಿರ್ಮಿಸಲಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೆಲ ಸದಸ್ಯರು ಹಾಗೂ ಪಿ.ಡಿ.ಓ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಲಾಗಿದೆ. ಸರ್ಕಾರದ ಅನುದಾನ ದುರ್ಬಳಕೆಯಾಗಲು ಅವಕಾಶ ನೀಡುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳಲು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇನ್ನು ಕುಮಟಾದ ಜಿಲ್ಲಾ ಪಂಚಾಯತ್ ಇಂಜಿನೀಯರಿಂಗ್ ವಿಭಾಗದ ಇಂಜಿನೀಯರ್ ಮಣಿಕಂಠ ಅವರನ್ನು ಕೇಳಿದರೆ, ಅದು ಕೌಂಪೌಂಡ್ ಅಲ್ಲ. ಪಂಚಾಯತ್ ಸದಸ್ಯರಾದ ದೀಪಾ ಅವರು ಈ ರಸ್ತೆಗಾಗಿ ತಮ್ಮ ಜಾಗ ಬಿಟ್ಟು ಕೊಟ್ಟಿದ್ದಾರೆ. ಅವರ ಜಾಗ ಎತ್ತರ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಧರೆ ಕುಸಿದು ರಸ್ತೆ ಮೇಲೆ ಬೀಳುವ ಸಾಧ್ಯತೆ ಇದೆ. ರಸ್ತೆ ಹಾಳಾಗಬಾರದು ಎಂಬ ಉದ್ದೇಶದಿಂದ ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಧರೆ ಕುಸಿಯದಂತೆ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದೇವು. ಆದರೆ ಈ ಬಗ್ಗೆ ಮಾಹಿತಿ ಇರದ ಸ್ಥಳೀಯರು ಪಂಚಾಯತ್‌ಗೆ ದೂರು ಸಲ್ಲಿಸಿದ್ದಾರೆ. ಹಾಗಾಗಿ ಸದ್ಯ ಕಾಮಗಾರಿ ನಿಲ್ಲಿಸಿದ್ದೇವೆ. ಸ್ಥಳೀಯರಿಗೆ ಈ ಬಗ್ಗೆ ಮನವರಿಕೆ ಮಾಡಿಸಿ, ಕಾಮಗಾರಿ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಸ್ಥಳೀಯರು ಹೇಳುವ ಪ್ರಕಾರ ಆ ಭಾಗದಲ್ಲಿ ಈಗಾಗಲೇ ಕಾಂಕ್ರೀಟ್ ರಸ್ತೆ ಇದೆ. ಇರುವ ರಸ್ತೆಯೇ ಮೇಲೆಯೇ ಮತ್ತೆ ರಸ್ತೆ ನಿರ್ಮಿಸುವ ಮೂಲಕ ಸರ್ಕಾರದ ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಳ್ಳುವ ಶಂಕೆ ಮೂಡಿದೆ. ಇನ್ನು ಮಳೆ ನೀರು ನುಗ್ಗಿ ಕೃಷಿಗೆ ಹಾನಿಯಾಗುವಂತಹ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವ ಬದಲೂ ಈ ರಸ್ತೆಗೆ ತಡೆಗೋಡೆ ಹೆಸರಿನಲ್ಲಿ ಗ್ರಾಪಂ ಸದಸ್ಯರಿಗೆ ಸಂಬಂಧಿಸಿದ ಜಾಗಕ್ಕೆ ಕಂಪೌಂಡ್ ನಿರ್ಮಿಸಿಕೊಡುವ ಮೂಲಕ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.