ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಟೊಂಕಾದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಟೊಂಕಾದ ವಾಣಿಜ್ಯ ಬಂದರು ಕಡಲತೀರದ ಸನಿಹದಲ್ಲಿ ಕಳೆದ ಎರಡು ದಿನಗಳಿಂದ ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳ ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳು ಪತ್ತೆಯಾಗಿದೆ.
ಮೊಟ್ಟೆ ಕುರುಹು ಪತ್ತೆಯಾಗುತ್ತಿದ್ದಂತೆ ಸಂರಕ್ಷಣೆಗಾಗಿ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿನ ಕಡಲತೀರದಲ್ಲಿ ಸೊಗಸಾಗಿ ಮೂಡಿರುವ ಕಡಲಾಮೆಗಳ ಹೆಜ್ಜೆ ಗುರುತುಗಳನ್ನು ಕೆಲ ದಿನದ ಹಿಂದೆ ಸ್ಥಳೀಯರು ಗಮನಿಸಿ ಕಡಲತೀರದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಹೆಜ್ಜೆ ಗುರುತುಗಳನ್ನು ಆಧರಿಸಿ ಓಟ್ಟೂ ನಾಲ್ಕು ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆ ಹಾಕಿರುವ ಗೂಡುಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಅದೇ ಸ್ಥಳದಲ್ಲಿ ಮರಿಗಳನ್ನು ಹಾಕುವವರೆಗೆ ಸಂರಕ್ಷಣೆ ಮಾಡುವ ರಕ್ಷಣಾತ್ಮಕ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಜೈನ ಜಟಗೇಶ್ವರ ಸಂಘದ ಸದಸ್ಯರು, ಮೀನುಗಾರರು ಮುಂದಾಗಿದ್ದಾರೆ. ಕಡಲವಿಜ್ಞಾನಿ ಡಾ.ಪ್ರಕಾಶ ಮೇಸ್ತ ಸ್ಥಳಕ್ಕಾಗಮಿಸಿ ಅಧ್ಯಯನ ನಡೆಸಿದ್ದಾರೆ.