• first
  Slide
  Slide
  previous arrow
  next arrow
 • ಜ.12ರಿಂದ ಭಾನ್ಕುಳಿ ಗೋಸ್ವರ್ಗದಲ್ಲಿ ಗೋದಿನ ಆಚರಣೆ

  300x250 AD

  ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ಜ.12ರಿಂದ 15ರವರೆಗೆ ಗೋದಿನ ಹಾಗೂ ಗೋವಿಗಾಗಿ ಆಲೆಮನೆ ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರ ಮಠ ಮಹಾಸಂಸ್ಥಾನದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ಗೋವಿನ ಪಾಲನೆ ಪೋಷಣೆಗೆ ವಿನಿಯೋಗಿಸಲಾಗುವುದು ಎಂದು ಗೋದಿನ ಆಚರಣೆ ಸಮಿತಿಯ ಅಧ್ಯಕ್ಷ ಎಂ.ಜಿ.ರಾಮಚಂದ್ರ ಮರ್ಡುಮನೆ ಹೇಳಿದ್ದಾರೆ.
  ಅವರು ತಾಲೂಕಿನ ಭಾನ್ಕುಳಿಗೋಸ್ವರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಿ ಗೋವಿನ ಸಗಣಿ ಗೊಬ್ಬರದಿಂದ ಸಾತ್ವಿಕವಾಗಿ ಬೆಳೆದ ಸಾವಯವ ಕಬ್ಬಿನಿಂದ ಸಾಂಪ್ರದಾಯಿಕ ಆಲೆಮನೆ ನಡೆಯಲಿದೆ. ಶುದ್ಧವಾದ ಕಬ್ಬಿನ ಹಾಲು ಹಾಗೂ ಬೆಲ್ಲ ಅಲ್ಲದೇ ಬೆಲ್ಲದ ವಿವಿಧ ಉತ್ಪನ್ನಗಳು ಹಾಗೂ ಗೋವಿನ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಸಭಾವೇದಿಕೆಯ ಅಕ್ಕಪಕ್ಕ ಎತ್ತರ ಪ್ರದೇಶದಲ್ಲಿ ವೇದಿಕೆಯನ್ನು ನಿರ್ಮಿಸಿ ಎರಡೂ ಕಡೆಯಲ್ಲೂ ಆಲೆಮನೆ ನಡೆಸಲಾಗುವುದು. ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸುತ್ತಲೂ ವಿವಿಧ ಉತ್ಪನ್ನಗಳ ಮಳಿಗೆ ತೆರೆಯಲಾಗುತ್ತದೆ. ಜ.12ರಂದು ಆಲೆಮನೆ ಮತ್ತು ಆಹಾರೋತ್ಸವ ಉದ್ಘಾಟನೆ ನಡೆಯಲಿದೆ.
  ಹಿರಿಯ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಹೆಗಡೆ ಗೋಳಗೋಡ ಹಾಗೂ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜ.13ರಂದು ಗೋಪಾಲಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ ಗೋಪೂಜೆ, ಗಂಗಾಜಲ ಅಭಿಷೇಕ, ಗೋಗಂಗಾರತಿ ನಡೆಯುತ್ತದೆ. ಜ.14 ಕಾಮಧೇನು ಹವನ, ಮೊಟ್ಟಮೊದಲಬಾರಿಗೆ ಗೋವಿಗೆ ಅಷ್ಟಾಂಗ ಸೇವೆ ನಡೆಯಲಿದೆ. ಜ.15 ಆಲೆಮನೆ ಮತ್ತು ಆಹಾರೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.  ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಸಿಗಂದೂರು ದೇವಾಲಯದ ಪ್ರಧಾನ ಅರ್ಚಕ ವಿ.ಶೇಷಗಿರಿ ಭಟ್ಟ, ಖ್ಯಾತ ಭಾಗವತ ಕೆ.ಜಿ.ರಾಮರಾವ್ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
  ಸಿದ್ದಾಪುರ ಮಂಡಳ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಮಾತನಾಡಿ ಕೆಲವು ವರ್ಷಗಳ ಹಿಂದಿನಿಂದ ಗೋದಿನ ಆಚರಣೆ ಪ್ರಾರಂಭಿಸಲಾಯಿತು. ಈ ನಡುವೆ 2 ವರ್ಷ ಕೋವಿಡ್ ಕಾರಣದಿಂದ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಆದರೆ ಈ ಸಲ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ‘ಗೋಪಾಲ ಗೌರವ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಗೋವಿನ ಕುರಿತಾದ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ನಶಿಸುತ್ತಿರುವ ಭತ್ತದ ತಳಿಗಳ ಸಂರಕ್ಷಕ ಮಂಡ್ಯದ ಕೆ.ಜಿ.ಅನಂತರಾವ್, ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳನ್ನು ಜೀವಒತ್ತೆ ಇಟ್ಟು ಪಾಲಿಸುತ್ತಿರುವ ತುಮಕೂರಿನ ಸಿ.ವಿ.ರಮಾದೇವಿ ಮಧುಗಿರಿ, ದೇಶಿ ಗೋತಳಿಗಳನ್ನು ಉಳಿಸಿ ಬೆಳೆಸಲು ಆಂದೋಲನ ಮಾಡುತ್ತಿರುವ ಮೂಡಿಗೆರೆಯ ನಿವೃತ್ತ ಪಶು ಪರಿವೀಕ್ಷಕ ಕ.ದಾ.ಕೃಷ್ಣರಾಜು, ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಣೆ ಮಾಡುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಅರಸಿಕೆರೆಯ ಶ್ಯಾಮ ಗೌಡ, ದೇಶಿ ತಳಿಯ ಹಸುಗಳ ಪಾಲನೆಗೆ ಪೂರಕವಾಗಿ ಕಾಡಸಿದ್ಧೇಶ್ವರ ಮಠದೊಂದಿಗೆ ತುಪ್ಪದ ವ್ಯವಹಾರ ಮಾಡಿ ಹೈನುಗಾರಿಕೆಯನ್ನು ಉತ್ತೇಜಿಸುತ್ತಿರುವ ವಿಜಯಪುರ ನಿಡೋಣಿಯ ಗುರುಪಾದ ನಿಡೋಣಿ ಇವರುಗಳಿಗೆ ‘ಗೋಪಾಲ ಗೌರವ’ ಪ್ರಶಸ್ತಿ ನೀಡಲಾಗುವುದು. ಮುಂಬಯಿಯ ದಿನೇಶ ಶಹರಾ ಫೌಂಡೇಶನ್ ಈ ಪ್ರಶಸ್ತಿಯ ಪ್ರಾಯೋಜಕತ್ವವನ್ನುವಹಿಸಲಿದ್ದು ಟ್ರಸ್ಟ್ನ ಮುಖ್ಯಸ್ಥ ದಿನೇಶ ಶಹರಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
  ಉತ್ಸವ ಸಮಿತಿ ಗೌರವಾಧ್ಯಕ್ಷ, ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮಾತನಾಡಿ ದಿ.14 ರಂದು ಅಖಿಲ ಹವ್ಯಕ ಮಹಾಸಭಾದಿಂದ ಶಿಷ್ಯವೇತನ ಪ್ರದಾನ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವ ‘ಪ್ರತಿಬಿಂಬ’ ಕಾರ್ಯಕ್ರಮವನ್ನು ಗೋದಿನ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಲಾಗಿದೆ. ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ದಿವಸಗಳ ಕಾರ್ಯಕ್ರಮಗಳಲ್ಲಿ ಶಿಷ್ಯಭಕ್ತರು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದರು. ಸಮಿತಿಗಳ ಪದಾಧಿಕಾರಿಗಳಾದ ಸತೀಶ ಹೆಗಡೆ ಆಲ್ಮನೆ, ಚಂದನ ಶಾಸ್ತ್ರಿ, ರಾಘವೇಂದ್ರ ಮುಸವಳ್ಳಿ, ಎಂವಿ.ಹೆಗಡೆ ಮುತ್ತಿಗೆ, ಮಧು ಜಿ.ಕೆ. ಇತರರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top