ಸಾಗರ: ನಗರದ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಮತ್ತು ವೇದನಾದ ಪ್ರತಿಷ್ಠಾನದಿಂದ ಗಾಂಧಿ ಮೈದಾನದಲ್ಲಿ ಜ.13ರಿಂದ 15 ರವರೆಗೆ 23ನೇ ವರ್ಷದ ಸಂಗೀತ ಸಂಭ್ರಮ, ತ್ರಯೋವಿಂಶಃ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ.
ಮೂರು ದಿನಗಳ ಕಾಲವೂ ಬೆಳಗ್ಗೆ 8.30ರಿಂದ ರಾತ್ರಿ 11.30ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯೆ ವಿ.ವಸುಧಾ ಶರ್ಮಾ ತಿಳಿಸಿದ್ದಾರೆ.
ಜ. 13ರಂದು ಬೆಳಗಿನಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, ಮಧ್ಯಾಹ್ನ 12ಕ್ಕೆ ಶಿರಸಿಯ ಸಮರ್ಥ ಹೆಗಡೆ ತಂಗಾರಮನೆ ಇವರಿಂದ ಹಿಂದೂಸ್ತಾನಿ ಬಾನ್ಸುರಿ ವಾದನ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷ ಪ.ಪೂ.ಡಾ.ವೈ.ರಾಜಾರಾಂ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಎಚ್.ಹಾಲಪ್ಪ, ಹಿರಿಯ ತಬಲಾ ವಾದಕ ಪಂಡಿತ್ ಮೋಹನ್ ಹೆಗಡೆ, ನಿವೃತ್ತ ಪ್ರಾಶುಪಾಲ ಆರ್.ಎಸ್.ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವೇದನಾದ ಪ್ರತಿಷ್ಠಾನದ ಅಧ್ಯಕ್ಷ ಎಚ್. ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ಸಂಜೆ 6.30ರಿಂದ ‘ಲಯ ಲಹರಿ’ ಎಂಬ ವಿಶೇಷ ಸಂಯೋಜನೆಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9ರಿಂದ ಪಂ.ಧನಂಜಯ್ ಹೆಗಡೆ ಮುಂಬೈ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜ.14ರಂದು ಬೆಳಗ್ಗೆ 8.30ರಿಂದ ವಿದ್ಯಾಲಯ ವಿದ್ಯಾರ್ಥಿಗಳಿಂದ ಗಾಯನ, ಮಧ್ಯಾಹ್ನ 12ಕ್ಕೆ ಕೋಲ್ಕತ್ತಾದ ಗುರುದತ್ತ ಅಗ್ರಹಾರ ಕೃಷ್ಣಮೂರ್ತಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂಜೆ 6.30 ರಿಂದ ಚೆನ್ನೈನ ವಿ. ಶ್ರೀಮತಿ ಕೃತಿ ಭಟ್ ಇವರಿಂದ ಕರ್ನಾಟಕೀ ಶಾಸ್ತ್ರೀಯ ಸಂಗೀತ, ರಾತ್ರಿ 9ರಿಂದ ವಿ.ವಸುಧಾ ಶರ್ಮಾ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಡೆಯಲಿದೆ.
ಜ.15ರಂದು ಬೆಳಗ್ಗೆ 8.30ಕ್ಕೆ ವಿದ್ಯಾಲಯ ವಿದ್ಯಾರ್ಥಿಗಳಿಂದ ಗಾಯನ, ಮಧ್ಯಾಹ್ನ 12 ರಿಂದ ಪಂಡಿತ್ ಮೋಹನ ಹೆಗಡೆ ಅವರಿಂದ ಸಂಗೀತ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಶಾಸಕ ಎಚ್. ಹಾಲಪ್ಪ, ಎಸ್‌ಪಿ, ಜಿ.ಕೆ.ಮಿಥುನ್‌ಕುಮಾರ್, ಪಂಡಿತ್ ಮೋಹನ ಹೆಗಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಪೈ ಮತ್ತಿತರರು ಪಾಲ್ಗೊಳ್ಳಲಿದ್ದು, ವೇದನಾದ ಪ್ರತಿಷ್ಠಾನದ ಅಧ್ಯಕ್ಷ ಎಚ್.ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು.
ಸಂಜೆ 6.3ರಿಂದ ಪಂ.ಅಭಿಷೇಕ್ ಬೋರ್ಕರ್ ಇವರಿಂದ ಹಿಂದೂಸ್ತಾನಿ ಸರೋದ್ ವಾದನ ನಡೆಯಲಿದ್ದು, ರಾತ್ರಿ 9.30ರಿಂದ ಮುಂಬೈನ ಪಂ.ರಮಾಕಾಂತ್ ಗಾಯಕ್ವಾಡ್ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.