Slide
Slide
Slide
previous arrow
next arrow

ಕಾರವಾರದ ಕಮಾಂಡರ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆ

300x250 AD

ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿ ನಗರಿ ಕಾರವಾರಕ್ಕೆ ಇನ್ನೆರಡು ತಿಂಗಳಲ್ಲಿ ಆಗಮಿಸುವ ಮುನ್ಸೂಚನೆ ದೊರೆತಿದೆ. ಮಾರ್ಚ್ ತಿಂಗಳಲ್ಲಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ (ಸಿಸಿಸಿ) ಮೋದಿಯವರು ಭಾಗವಹಿಸುವ ನಿರೀಕ್ಷೆ ಇದೆ.
ಪೂರ್ವ ಮತ್ತು ಪಶ್ಚಿಮ ನೌಕಾಪಡೆಗಳನ್ನು ವಿಲೀನಗೊಳಿಸಿ, ಭೂಸೇನೆ, ವಾಯುಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ನ ಸ್ವತ್ತುಗಳನ್ನು ಹಾಗೂ ಕಾರ್ಯಾಚರಣೆಯನ್ನು ಒಂದೇ ವೇದಿಕೆಯಡಿ ನಿಯಂತ್ರಣಕ್ಕೆ ತರುವ ಮೆರಿಟೈಮ್ ಥಿಯೇಟರ್ ಕಮಾಂಡ್ (ಎಂಟಿಸಿ) ಸ್ಥಾಪನೆ ಈ ಹಿಂದಿನ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಸಿ) ಬಿಪಿನ್ ರಾವತ್ ಅವರ ಕನಸಿನ ಕೂಸಾಗಿತ್ತು. ಮೆರಿಟೈಮ್ ಥಿಯೇಟರ್ ಕಮಾಂಡ್‌ನ ಕುರಿತು ರಾವತ್ ಅವರು ಸಾಕಷ್ಟು ಅಧ್ಯಯನ ನಡೆಸಿ, ರಚನೆ ಕುರಿತು ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವರ ನಿಧನದ ಬಳಿಕ ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.
ಇದೀಗ ಮತ್ತೆ ಈ ಬಗ್ಗೆ ಸಿದ್ಧತಾ ಕಾರ್ಯಗಳು ಚುರುಕುಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇದರ ಕೇಂದ್ರ ಕಚೇರಿ ಸ್ಥಾಪಿಸಲು ತಯಾರಿ ನಡೆದಿವೆ ಎನ್ನಲಾಗುತ್ತಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ಈಗಾಗಲೇ ವೇಗ ಪಡೆದುಕೊಂಡಿದ್ದು, ಒಮ್ಮೆ ಈ ಕಾಮಗಾರಿಗಳು ಮುಕ್ತಾಯಗೊಂಡಲ್ಲಿ ಮೆರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪನೆಗೆ ಎಲ್ಲಾ ಸೌಕರ್ಯಗಳು ಸಿಕ್ಕಂತಾಗುತ್ತವೆ ಎನ್ನುತ್ತವೆ ಮೂಲಗಳು.
ಲಕ್ಷಕ್ಕೂ ಅಧಿಕ ಸೈನಿಕರು, ನೂರಾರು ಯುದ್ಧನೌಕೆಗಳು, ವಿಮಾನಗಳು ಈ ಮೆರಿಟೈಮ್ ಥಿಯೇಟರ್ ಕಮಾಂಡ್‌ನ ಅಡಿ ಕಾರವಾರಕ್ಕೆ ಬರಲಿದ್ದು, ಇದಕ್ಕಾಗಿ ಅವಶ್ಯಕ ಮೂಲಸೌಕರ್ಯಗಳ ಅಭಿವೃದ್ಧಿಗೊಳಿಸುವ ಕಾರ್ಯ ಸೀಬರ್ಡ್ ಎರಡನೇ ಹಂತದ ಯೋಜನೆಯಲ್ಲಿ ಭರದಿಂದ ಸಾಗಿದೆ. ಕಾರವಾರದಲ್ಲಿ ಮೆರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪನೆಯ ಕುರಿತಾಗಿ ಸರ್ಕಾರ ಅಧಿಕೃತವಾಗಿ ಆದೇಶಿಸುವುದೊಂದೇ ಬಾಕಿ ಇದೆ. ಆದರೆ ಇದಕ್ಕೆ ಪೂರಕವಾಗಿ ಈಗಾಗಲೇ ನೌಕಾನೆಲೆಯಲ್ಲಿ ತಯಾರಿಗಳು ನಡೆದಿದ್ದು, ಈ ನಿಟ್ಟಿನಲ್ಲಿ ಮಾರ್ಚ್ ನಲ್ಲಿ ನೌಕಾನೆಲೆಯಲ್ಲಿ ಈ ಸಂಯೋಜಿತ ಕಮಾಂಡರ್ ಗಳ ಸಮ್ಮೇಳನವನ್ನ ಆಯೋಜಿಸಲಾಗುತ್ತಿದೆ.
ಹಾಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಈ ವೇಳೆ ಪ್ರಧಾನಿ ಮೋದಿಯವರಿಗೆ ಈ ಮೆರಿಟೈಮ್ ಥಿಯೇಟರ್ ಕಮಾಂಡ್ ನ ಕಾರ್ಯಾಚರಣೆಯ ಸಮಗ್ರ ಮಾಹಿತಿ ಒದಗಿಸುವವರಿದ್ದಾರೆನ್ನಲಾಗಿದೆ. ಭಾರತೀಯ ನೌಕಾಪಡೆ ಆಯೋಜಿಸುವ ಈ ಸಮ್ಮೇಳನದಲ್ಲಿ ಕೇವಲ ಕಮಾಂಡರ್ ಇನ್ ಚೀಫ್ ರ್ಯಾಂಕ್ ನ ಅಧಿಕಾರಿಗಳು ಮಾತ್ರ ಭಾಗವಹಿಸಲಿದ್ದು, ಇಲ್ಲಿ ಮೂರೂ ಸೇನೆಗೆ ಸಂಬoಧಿಸಿದ ಬಹುಮುಖ್ಯ ಚರ್ಚೆಗಳು ನಡೆಯಲಿವೆ ಎನ್ನಲಾಗುತ್ತಿದೆ. ಪ್ರಧಾನಿ ಭೇಟಿಯ ಬಗ್ಗೆ ರಕ್ಷಣಾ ಇಲಾಖೆ ಅಥವಾ ಪ್ರಧಾನಮಂತ್ರಿ ಕಾರ್ಯಾಲಯ ಈವರೆಗೆ ಅಧಿಕೃತಗೊಳಿಸಿಲ್ಲ. ಆದರೆ ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ಪ್ರಧಾನಿ ಭೇಟಿಯ ಬಗ್ಗೆ ಸುಳಿವು ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top