ಭಟ್ಕಳ: ಮೀನುಗಾರರ ಆರಾಧ್ಯ ದೈವ ಅಳ್ವೆಕೋಡಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮಾರಿಜಾತ್ರಾ ಮಹೋತ್ಸವ ಮಂಗಳವಾರದಿoದ ಶುಭಾರಂಭಗೊoಡಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ದೇಗುಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು, ವಿಶೇಷ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ.
ಸುಮಾರು 300 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಈ ದುರ್ಗಾಪರಮೇಶ್ವರಿ, ಭಕ್ತರು ಬೇಡಿದ್ದನ್ನು ಕರುಣಿಸುತ್ತಾಳೆಂಬ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಗ್ರಾಮದ ಮೀನುಗಾರ ಸಮುದಾಯದವರು ದೇವಿಗೆ ನಡೆದುಕೊಳ್ಳಲು ಪ್ರಾರಂಭಿಸಿದಾಗಿನಿoದಲೂ ಸಾಕಷ್ಟು ಅಭಿವೃದ್ಧಿ ಕಂಡಿದ್ದಾರೆ. ಇದರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಇಲ್ಲಿ ವಿಜ್ರಂಭಣೆಯಿoದ ಮಾರಿ ಜಾತ್ರೆ ಆಚರಿಸಲಾಗುತ್ತಿದೆ. ಆದರೆ ಕೋವಿಡ್ ಕಾರಣದಿಂದಾಗಿ 2021ರಲ್ಲಿ ಮುಂದೂಡಲ್ಪಟ್ಟಿದ್ದ ಜಾತ್ರೆಯನ್ನ ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಮಂಗಳವಾರದoದು ಬೆಳಿಗ್ಗೆ ಮಾರಿ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ ಮೊದಲನೇ ಪೂಜೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯವರಿoದ ಪೂಜೆ ನೆರವೇರಿತು. ನಂತರ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಭಕ್ತಾದಿಗಳು ಸರದಿಯ ಸಾಲಿನಲ್ಲಿ ನಿಂತು ಹಣ್ಣುಕಾಯಿ, ವಿವಿಧ ಸೇವೆ ಅರ್ಪಿಸಿ ಪೂಜೆ ಸಲ್ಲಿಸಿದರು. ಮಾರಿ ಜಾತ್ರ ಸಮಿತಿಯ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಭಕ್ತರಿಗೆ ಮಾರಿದೇವಿಯ ದರ್ಶನ ಪಡೆಯಲು ಅನುವು ಮಾಡಿಕೊಟ್ಟರು. ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಜಾತ್ರೆಗೆ ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸೇರಿದಂತೆ ಅನೇಕ ಗಣ್ಯರು ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿದರು.