ಭಟ್ಕಳ: ನಾನು ಮಾಡುತ್ತಿರುವ ಅಭಿವೃದ್ಧಿ ಕಾರ್ಯವನ್ನ ಸಹಿಸದ ಕೆಲವರು ಹತಾಶರಾಗಿ ನಕಲಿ ಸಾಮಾಜಿಕ ಜಾಲತಾಣಗಳ ಅಕೌಂಟ್ ಮೂಲಕ ನನ್ನ ತೇಜೋವಧೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕುತಂತ್ರಗಳಿಗೆ ನಾನು ಯಾವುದೇ ಕಾರಣಕ್ಕೂ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಕಿಡಿಕಾರಿದ್ದಾರೆ.
ತಾಲೂಕಿನ ಅಳ್ವೇಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ 224 ಕ್ಷೇತ್ರದಲ್ಲಿ ಭಟ್ಕಳ ಕ್ಷೇತ್ರದಲ್ಲಿಯೇ ಈ ರೀತಿ ಶಾಸಕರ ವಿರುದ್ಧ ನಕಲಿ ಸಾಮಾಜಿಕ ಜಾಲತಾಣಗಳ ಅಕೌಂಟ್ ಮೂಲಕ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಸದನದಲ್ಲೂ ಧ್ವನಿ ಎತ್ತಿದ್ದೇನೆ ಎಂದಿದ್ದಾರೆ.
ನಮ್ಮ ಕಾರ್ಯಕರ್ತರಿಗೆ ಈ ಬಗ್ಗೆ ವಿನಂತಿ ಮಾಡಿಕೊಂಡಿದ್ದೇನೆ. ಈ ನಕಲಿ ಅಕೌಂಟ್ ಗಳ ವಿರುದ್ಧ ಪ್ರತಿಕ್ರಿಯೆ ನೀಡದಂತೆ ತಿಳಿಸಿದ್ದೇನೆ. ನಮ್ಮ ನಡೆ, ನುಡಿಯನ್ನ ಇಟ್ಟುಕೊಂಡು ಚುನಾವಣೆ ಎದುರಿಸುವಂತೆ ಎಲ್ಲರಿಗೂ ತಿಳಿಸಿದ್ದೇನೆ. ಕಾಣದ ಕೈಗಳು ಇಂತಹ ಕೃತ್ಯವನ್ನ ಮಾಡಿಸುತ್ತಿದೆ. ಅಭಿವೃದ್ದಿ ಸಹಿಸದವರು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕ್ಷೇತ್ರದಲ್ಲಿ ಶಾಸಕನಾದ ನಂತರ ಹತ್ತು ಹಲವು ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ. ಕುಣಬಿ ಮರಾಠಿ, ಗೋಂಡಾ, ಹಾಲಕ್ಕಿ ಸೇರಿದಂತೆ ಹಲವು ಸಮಾಜದವರು ನೆಲೆಸಿರುವ ಪ್ರದೇಶಕ್ಕೆ ರಸ್ತೆ ಸಂಪರ್ಕ ಮಾಡುವ ಕೆಲಸ ನನ್ನ ಅವಧಿಯಲ್ಲಿ ಆಗಿದೆ. ವಿರೋಧ ಪಕ್ಷದವರು ನಾನು ತಂದ ರಸ್ತೆಯನ್ನ ಇಲಾಖೆಯವರಿಗೆ ಹೇಳಿ ನಿಲ್ಲಿಸುವ ಕೆಲಸ ಮಾಡಲು ಹೊರಟಿದ್ದಾರೆ. ನಾವು ಮಾಡಿದ ಅಭಿವೃದ್ದಿಯನ್ನ ಅವರಿಗೆ ಸಹಿಸಲು ಆಗುತ್ತಿಲ್ಲ. ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯವಾದ ರಸ್ತೆ, ಕುಡಿಯುವ ನೀರು, ಶಾಲೆಗಳಿಗೆ ಹೆಚ್ಚು ಒತ್ತನ್ನ ಅಧಿಕಾರದ ಅವಧಿಯಲ್ಲಿ ನೀಡಿದ್ದೇನೆ ಎಂದಿದ್ದಾರೆ.
ರಾಜಕೀಯ ಎಂದಿದ್ದರೆ ಅದು ಬಿಜೆಪಿಯಲ್ಲಿ…
ನನ್ನ ವಿರುದ್ದ ಅನೇಕರು ಪಕ್ಷ ಬಿಡುತ್ತೇನೆ ಎಂದು ಅಪಪ್ರಚಾರ ಮಾಡಲು ಹೊರಟಿದ್ದು ನನ್ನ ಕಾರ್ಯಕರ್ತರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ.
ಕೆಲ ದಿನಗಳಿಂದ ಸುನೀಲ್ ನಾಯ್ಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ಕ್ಷೇತ್ರದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಅನಂತ್ ಕುಮಾರ ಅವರ ನೇತೃತ್ವದ ಬಿಜೆಪಿಗೆ ಬಂದಿದ್ದು ರಾಜಕೀಯ ಅಂತಾ ಇದ್ದರೆ ಅದು ಬಿಜೆಪಿಯಲ್ಲಿ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ಅನೇಕರು ಅಪಪ್ರಚಾರ ಮಾಡುತ್ತಿದ್ದು, ಕಾಣದ ಕೈಗಳು ಇಂತಹ ಕೆಲಸ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ಇಂತಹ ಅಪಪ್ರಚಾರ ನಂಬಬಾರದು. ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಕಾರ್ಯಕರ್ತನಾಗಿ, ಶಾಸಕನಾಗಿ ಪಕ್ಷದಲ್ಲಿ ದುಡಿಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಚಿಂತನೆಯೇ ಮಾಡಿಲ್ಲ. ಮೋದಿ, ಬೊಮ್ಮಾಯಿಯವರ ಅವರ ನೇತೃತ್ವದ ಬಿಜೆಪಿ ಪಕ್ಷದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇನೆ. ಮುಂದಿನ ಚುನಾವಣೆ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲಲಿದೆ. ಕಾಂಗ್ರೆಸ್ ಹೋಗುವಂತಹ ತಪ್ಪನ್ನ ನಮ್ಮ ಕಾರ್ಯಕರ್ತರು ಮಾಡಬಾರದು ಎಂದಿದ್ದಾರೆ.
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಶಾಸಕನಾಗಿದ್ದರೂ ಮೊದಲು ಕಾರ್ಯಕರ್ತನಾಗಿರುತ್ತೇನೆ. ಪಕ್ಷ ಯಾರನ್ನ ಗುರುತಿಸಿ ಮುಂದಿನ ಚುನಾವಣೆಯಲ್ಲಿ ಟಿಕೇಟ್ ನೀಡುತ್ತದೆಯೋ ಅಂತವರಿಗೆ ನಾನೇ ನಿಂತು ಪ್ರಚಾರ ಮಾಡಿ ಗೆಲ್ಲಿಸುವ ಕಾರ್ಯವನ್ನ ಮಾಡುತ್ತೇನೆ. ಬಿಜೆಪಿ ಪಕ್ಷ ಶಿಸ್ತಿನ ಪಕ್ಷವಾಗಿದ್ದು ಪಕ್ಷದ ಯಾವುದೇ ನಿರ್ಧಾರಕ್ಕೂ ನಾವು ಬದ್ದರಾಗಿರುತ್ತೇವೆ. ಅನಂತ್ ಕುಮಾರ್ ಹೆಗಡೆ ನಮ್ಮ ಗುರುಗಳು. ಅವರ ಸಿದ್ದಾಂತವನ್ನೇ ಅಳವಡಿಸಿಕೊಂಡು ಬಂದಿದ್ದು ಪಕ್ಷವನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದ್ದಾರೆ.