ದಾಂಡೇಲಿ: ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರವರ ‘ಜನುಮ ಜನುಮಕು ನೀ’ ಕವನ ಸಂಕಲನ ಮತ್ತು ‘ದಿ ಕ್ವೆಸ್ಟ್’ ಕೃತಿಗಳನ್ನು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅನಾರವಣಗೊಳಿಸಲಾಯಿತು.
ಶ್ರೀಕ್ಷೇತ್ರ ಮಂತ್ರಾಲಯದ ಭಗವಾನ್ ಶ್ರೀರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ನೂತನ ಕೃತಿಗಳನ್ನು ಅನಾವರಣಗೊಳಿಸಿ, ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರವರ ಸಾಹಿತ್ಯ ಕೃಷಿ ಮತ್ತು ಮಾಸ್ಕೇರಿ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾಸ್ಕೇರಿ ಪ್ರತಿಷ್ಠಾನದಿಂದ ಕೊಡಮಾಡುವ ಶ್ರೀಗಂಧ ಹಾರ ಪ್ರಶಸ್ತಿಯನ್ನು ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಕವಿ ವನರಾಗ ಶರ್ಮಾ, ಕುವೆಂಪು ವಿಶ್ವವಿದ್ಯಾಲಯದ ಡಾ.ನೆಲ್ಲಿಕಟ್ಟಿ ಸಿದ್ದೇಶ, ಗುರುಮಾತೆ ಬೆಳಿಗಟ್ಟಿ ಮಹಾದೇವಮ್ಮ, ವಾಗ್ಮಿ ಮಂಜುನಾಥ್ ಬರ್ಗಿ ಇವರಿಗೆ ಶ್ರೀ.ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಶ್ರೀಗಂಧ ಹಾರ ಪ್ರಶಸ್ತಿ, ಫಲಕ ಮತ್ತು ಪಳಪುಷ್ಪ ನೀಡಿ ಆಶೀರ್ವದಿಸಿದರು.
ನಂತರ ನಡೆದ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಯವರ ಆಪ್ತರಾದ ಪುರಾಣಿಕ್, ದಾoಡೇಲಿಯ ಶಂಕರ ಮುಂಗರವಾಡಿ, ಪ್ರಾಚಾರ್ಯರಾದ ಆರ್.ಜಿ.ಚಿಕ್ಕಮಠ ಗದಗ, ಪ್ರಾಚಾರ್ಯರಾದ ಮಂಜುನಾಥ ಭಟ್ ಬೆಳಗಾವಿ, ಹಾವೇರಿಯ ಮಂಜುನಾಥ ಮಾಳದನಕರ ಇವರಿಗೆ ಮಾಸ್ಕೇರಿ ಪ್ರತಿಷ್ಟಾನದ ವತಿಯಿಂದ ಶ್ರೀಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಸ್ಕೇರಿ ಪ್ರತಿಷ್ಠಾನದ ಪ್ರವರ್ತಕರು ಮತ್ತು ಸಾಹಿತಿಗಳಾದ ಮಾಸ್ಕೇರಿ ಎಂ.ಕೆ. ನಾಯಕರವರು ಡಾ.ಡಿ.ಕೆ.ಗಾಂವಕರ್, ಗಣಪತಿ ಕಂಚಿಪಾಲ, ಮುಕ್ತಾ ಶಂಕರ, ಶಿವಲೀಲಾ, ನಿರುಪಮಾ ನಾಯಕ, ಮಲ್ಲಿಕಾಜುಣ್ ನಾಯ್ಕ, ಕವಿತಾ ಹೆಬ್ಬಾರ್, ಉಮೇಶ್ ಮುಂಡಳ್ಳಿ, ದೀಪಾಲಿ ಸಾವಂತ, ವಿಶ್ವನಾಥ ಭಾಗವತ್, ಸುಧಾಕರ ನಾಯಕ ಮೊದಲಾದವರಿಗೆ ಸಂಕ್ರಮಣೋತ್ಸವದಲ್ಲಿ ಶ್ರೀಗುರು ಪ್ರಶಸ್ತಿ ನೀಡುವುದಾಗಿ ಘೋಷಿಸಿದರು. ಶಂಕರ ಮುಂಗರವಾಡಿಯವರು ಸ್ವಾಗತಿಸಿ, ವಂದಿಸಿದರು.