ಸಿದ್ದಾಪುರ: ಮನುಷ್ಯತ್ವದ ವಿಕಾಸಕ್ಕಾಗಿ ಜ್ಞಾನವನ್ನು ವಿಸ್ತಾರಗೊಳಿಸಿಕೊಂಡು ಒಳ್ಳೆಯ ಕೆಲಸಗಳ ಮೂಲಕ ವ್ಯಕ್ತಿತ್ವವನ್ನು ಸಂಪಾದಿಸುವತ್ತ ನಮ್ಮ ಗುರಿ ಇರಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ತಮ್ಮಣ್ಣ ಬೀಗಾರ ಅವರು ಹೇಳಿದರು.
ಅವರು ತಾಲೂಕಿನ ಎಸ್.ವಿ.ಗಂಡು ಮಕ್ಕಳ ಪ್ರೌಢಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲಿಕೆಯೆಂದರೆ ಕೇವಲ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಅಂಕಗಳಿಕೆ ಆಗಿರಬಾರದು. ಜ್ಞಾನಾರ್ಜನೆ ಬಹುಮುಖ್ಯವಾದಂತಹ ಉದ್ದೇಶ. ಕೇವಲ ಅಂಕ ಗಳಿಕೆಯೇ ನಮ್ಮ ಮಾನದಂಡವಾಗಿ ಶಿಕ್ಷಣದಲ್ಲಿ ಗೋಚರವಾಗುತ್ತಿದೆ ಎಂದರು.
ಸಿದ್ದಿವಿನಾಯಕ ಬಾಲಕಿಯರ ಪ್ರೌಢಶಾಲೆ ಮುಖ್ಯಾಧ್ಯಾಪಕ ರಾಜಾರಾಮ ದೀಕ್ಷಿತ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಾಜು ನಾಯ್ಕ ಮಾತನಾಡಿ, ಮಕ್ಕಳ ಸುಪ್ತಪ್ರತಿಭೆಯನ್ನು ಹೊರ ಹಾಕಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಹೇಳಿದರು.
ಎಸ್.ವಿ.ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಅರುಣ ಭಾಗ್ವತ ಸ್ವಾಗತಿಸಿದರು. ರಮೇಶ ನಾಯ್ಕ ನಿರ್ವಹಿಸಿದರು. ಶಿಲ್ಪಾ ನಾಯ್ಕ ವಂದಿಸಿದರು.