ಕಾರವಾರ: ಭಾರತ ಮಾತೆಯನ್ನು ಎಷ್ಟು ಗೌರವಿಸುತ್ತೇವೆಯೋ ಅದೇ ರೀತಿ ಪಕ್ಷ ನಮಗೆ ತಾಯಿ ಸಮಾನ. ಅದಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ನಡೆದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷವನ್ನು ಬಲಪಡಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕು. ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಬಾರದು. ವಿರೋಧ ಪಕ್ಷದವರು ಟೀಕೆ ಮಾಡುತ್ತಿರುತ್ತಾರೆ. ಅದನ್ನು ಕಿವಿಗೆ ತೆಗೆದುಕೊಳ್ಳಬಾರದು ಎಂದರು.
ಬಿಜೆಪಿಯಿAದ ಹಿಂದೆ ಗ್ರಾಮ ಪಂಚಾಯತಿ ಸದಸ್ಯರಾಗಿದ್ದವರ ಸಂಖ್ಯೆ ಕಡಿಮೆ ಇತ್ತು. ಆದರೆ, ಇಂದು ಕಾರವಾರ ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅಧಿಕಾರದಲ್ಲಿದ್ದಾರೆ. ಪಕ್ಷವೂ ಹೆಚ್ಚು ಬಲಿಷ್ಟವಾಗಿದೆ. ಎಲ್ಲರೂ ಒಟ್ಟಾಗಿದ್ದು, ಬೂತ್ ಮತ್ತಷ್ಟು ಬಲಪಡಿಸಬೇಕು. ಬೂತ್ ನಲ್ಲಿ ಇರುವ ಮನೆಗಳಿಗೆ ಸರ್ಕಾರದ ಸೌಲಭ್ಯಗಳಾದ ಪಿಂಚಣಿ, ಪಡಿತರ, ಆಯುಷ್ಮಾನ ಭಾರತ ಯೋಜನೆ ಹೀಗೆ ಹತ್ತು ಹಲವು ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವ ಯೋಜನೆಗಳು ಜನರಿಗೆ ತಲುಪುತ್ತಿವೆಯೋ ಇಲ್ಲವೋ ಎಂಬುದನ್ನು ನೋಡಬೇಕು. ತಲುಪದೇ ಇದ್ದಲ್ಲಿ ಅವರಿಗೆ ಯೋಜನೆಗಳು ತಲುಪುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ರಾಜೇಂದ್ರ ನಾಯ್ಕ, ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ವಿವಿಧ ಮೋರ್ಚಾದವರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.