ಕುಮಟಾ: ತಾಲೂಕಿನ ಹಿರೇಗುತ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಗ್ರಾಹಕರ ಸುರಕ್ಷತೆ ಮತ್ತು ಜಾಗೃತಿ ಕಾರ್ಯಗಾರ ನಡೆಯಿತು.
ಹೆಸ್ಕಾಂ ಕುಮಟಾ ಹಾಗೂ ಗೋಕರ್ಣ ಶಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಗಾರದಲ್ಲಿ ಹೆಸ್ಕಾಂ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್ ಭಾಗವತ ರವರು ವಿದ್ಯುತ್ ಶಕ್ತಿಗೆ ಸಂಬoಧಿಸಿದ ಸರ್ಕಾರದ ಗ್ರಾಹಕ ಸ್ನೇಹಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವಿದ್ಯುತ್ ಸುರಕ್ಷತೆಯ ಬಗ್ಗೆ ಹೆಸ್ಕಾಂನ ಕುಮಟಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ಮಡಿವಾಳ ಮಾತನಾಡಿ, ವಿದ್ಯುತ್ತನ್ನು ಮತ್ತೆ ತರಬಹುದು. ಆದರೆ ಜೀವವನ್ನು ತರಲಾಗುವುದಿಲ್ಲ. ಹಾಗಾಗಿ ವಿದ್ಯುತ್ತಿನ ಬಗ್ಗೆ ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ ಎಂದು ವಿವರವಾಗಿ ತಿಳಿಸಿಕೊಟ್ಟರು.ವಿದ್ಯುತ್ ಬಿಲ್ಲು ಉಳಿತಾಯದ ಬಗ್ಗೆ ಸಹಾಯಕ ಲೆಕ್ಕಾಧಿಕಾರಿ ಲೋಹಿತ್ ನಾಯಕರವರು ಮತ್ತು ಸಿ.ಜಿ.ಆರ್.ಎಫ್ ಸದಸ್ಯ ಲೋಕೇಶ್ ಹೆಗಡೆಯವರು ಗ್ರಾಹಕರ ಹಕ್ಕುಗಳು ಮತ್ತು ಒಂಬುಡ್ಸ್ಮನ್ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಅರುಣ್ ಹೆಗಡೆಯವರು ಸ್ವಾಗತಿಸಿ, ಪ್ರಾಸ್ತಾವಿಸಿದರು. ಹೆಸ್ಕಾಂ ಶಾಖಾಧಿಕಾರಿ ನಾಗರಾಜ್ ಗೌಡ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.